ಜಿಲ್ಲೆ

ಮೂಳೆ ಮುರಿತ ಚಿಕಿತ್ಸೆಗೆ ಜಿಲ್ಲಾಸ್ಪತ್ರೆ ಉತ್ತಮ

Chitradurga

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿವವರೇ ಹೆಚ್ಚಿರುವ ಸನ್ನಿವೇಶದಲ್ಲಿ ಚಿತ್ರದುರ್ಗ ಜಿಲ್ಲಾಸ್ಪತ್ರೆ, ಮೂಳೆ ಮುರಿತ ಚಿಕಿತ್ಸೆಗೆ ರಾಜ್ಯದಲ್ಲೇ ಉತ್ತಮವೆಂಬ ಹೆಸರು ಗಳಿಕೆಯ ಹಾದಿಯಲ್ಲಿದೆ.

ಇಲ್ಲಿಯ ತಜ್ಞ ವೈದ್ಯರ ಪ್ರಕಾರ ಬೆಂಗಳೂರಿನ ಬೋರಿಂಗ್ ಹಾಗೂ ವಿಕ್ಟೋರಿಯಾ ಆಸ್ಪತ್ರೆಗಳನ್ನು ಹೊರತು ಪಡಿಸಿದರೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಪೈಕಿ, ಅತೀ ಹೆಚ್ಚು ಮೂಳೆ ಮುರಿತಕ್ಕೆ ಸಂಬಂಧಿಸಿದ ಶಸ್ತ್ರ ಚಿಕಿತ್ಸೆಗಳು ಜಿಲ್ಲಾಸ್ಪತ್ರೆಯಲ್ಲಿ ನಡೆಯುತ್ತಿವೆ.

ಅನೇಕ ಕೊರತೆಗಳ ನಡುವೆ ಹೆಚ್ಚಿನ ಶಸ್ತ್ರ ಚಿಕಿತ್ಸೆಗಳು ಇಲ್ಲಿ ಆಗುತ್ತಿವೆ. ಆಂಧ್ರಪ್ರದೇಶ ಗಡಿಭಾಗ, ತುಮಕೂರು, ದಾವಣಗೆರೆ, ಬಳ್ಳಾರಿ ಜಿಲ್ಲೆಗಳಿಂದ ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದಾರೆ. ಆಸ್ಪತ್ರೆಯ ಲೆವೆಲ್-ಟು ಟ್ರೊಮಾ ಸೆಂಟರ್‌ನ ಸಿಟಿ ಸ್ಕಾೃನರ್ ಕೈ ಕೊಟ್ಟಿದ್ದರೂ, ಎಕ್ಸರೇ ನೆರವಿನೊಂದಿಗೆ ಮೂಳೆ ಮುರಿತದ ಅಗತ್ಯ ಗಾಯಾಳುಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ.

ಸ್ಪೈನ್‌ಕಾರ್ಡ್ ಹೊರತುಪಡಿಸಿ, ಕಳೆದ ವರ್ಷ ಇಲ್ಲಿ ಮೂಳೆ ಮುರಿತದ ಚಿಕಿತ್ಸೆಗೆ ಸಂಬಂಧಿಸಿದಂತೆ 1384 ಆಪರೇಷನ್‌ಗಳಾಗಿವೆ. 2019 ಜ-106, ಫೆ-95, ಮಾ.-113, ಏ.-128, ಮೇ-129, ಜೂ-109, ಜು-111, ಆ-103, ಸೆ.-105, ಅ.-127, ನ.-122 ಹಾಗೂ ಡಿಸೆಂಬರ್‌ನಲ್ಲಿ ಅತೀ ಹೆಚ್ಚು 136 ಹಾಗೂ 2020ರಿಂದ ಈವರೆಗೆ 200ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳಾಗಿವೆ.

ಇಲ್ಲಿ ನಾಲ್ವರು ಕೀಲುಮೂಳೆ ತಜ್ಞ ವೈದ್ಯರಿದ್ದಾರೆ. ಡಾ.ಎಸ್.ಪಿ.ದಿನೇಶ್, ಡಾ.ಜೆ.ಡಿ.ವೆಂಕಟೇಶ್, ಡಾ.ಎಸ್.ಎಂ.ಶ್ರೀಧರ್ ಹಾಗೂ ಡಾ.ಜಯರಾಂ ಚಿಕಿತ್ಸೆ ನೀಡುತ್ತಿದ್ದಾರೆ. ಅವಶ್ಯ ಇನ್‌ಪ್ಲಾಂಟ್ಸ್‌ಗಳನ್ನೂ ಅಳವಡಿಸಲಾಗುತ್ತಿದೆ.

ಎಂಆರ್‌ಐ ಸ್ಕಾೃನಿಂಗ್‌ಗೆ ಕಾಯಬೇಕು: ಜಿಲ್ಲಾಸ್ಪತ್ರೆಯಲ್ಲಿ ನಿತ್ಯ 50ಕ್ಕೂ ಹೆಚ್ಚು ರೋಗಿಗಳಿಗೆ ಎಂಆರ್‌ಐ ಹಾಗೂ ನೂರಾರು ಜನರಿಗೆ ಎಕ್ಸರೆ ಮಾಡಲಾಗುತ್ತಿದೆ. ಒತ್ತಡ ಹೆಚ್ಚಿರುವ ಹಿನ್ನೆಲೆಯಲ್ಲಿ ಎಂಆರ್‌ಐ ಸ್ಕಾೃನಿಂಗ್‌ಗೆ ರೋಗಿಗಳು ಕಾಯುವುದು ಅನಿವಾರ್ಯವಾಗಿದೆ. ಸರ್ಕಾರಿ ಮೆಡಿಕಲ್ ಕಾಲೇಜು ಆರಂಭವಾಗಿದ್ದರೆ ಟ್ರೊಮಾ ಸೆಂಟರ್ ಲೆವೆಲ್-ಟುನಿಂದ ಒನ್ ಎಂದು ಮೇಲ್ದರ್ಜೆಗೆ ಏರಬೇಕಿತ್ತು. ಆದರೆ, ಕಾಲೇಜು ಇಲ್ಲದ ಕಾರಣಕ್ಕೆ ಲೆವೆಲ್ ಟು-ನಲ್ಲೇ ಈ ಸೆಂಟರ್ ಕಾರ್ಯನಿರ್ವಹಿಸುತ್ತಿದೆ. ಆದರೂ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ವಾಸ್ತವ್ಯದ ಸಂದರ್ಭದಲ್ಲಿ ಟ್ರೊಮಾ ಸೆಂಟರ್ ಮೇಲ್ದರ್ಜೆಗೇರಿಸುವಂತೆ ಮನವಿ ಸಲ್ಲಿಸಲಾಗಿದೆ.

ವಿಜಯವಾಣಿ ಫಲಶೃತಿ: ಕಳೆದ ನವೆಂಬರ್‌ನಿಂದ ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕಾೃನರ್ ಕೆಟ್ಟಿದ್ದನ್ನು ವಿಜಯವಾಣಿ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಇದರ ದುರಸ್ತಿಗಾಗಿ ತಜ್ಞರು ಆಗಮಿಸಿದ್ದು, ಇನ್ನೆರೆಡು ದಿನಗಳಲ್ಲಿ ಸಿಟಿ ಸ್ಕಾೃನರ್ ಕಾರ್ಯಾರಂಭ ಮಾಡಲಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಅರ್ಥೋ ಸರ್ಜನ್ ಡಾ.ಎಸ್.ಪಿ.ದಿನೇಶ್ ಹೇಳಿಕೆ: ಬೆಂಗಳೂರಿನ ವಿಕ್ಟೋರಿಯಾ ಹಾಗೂ ಬೋರಿಂಗ್ ಆಸ್ಪತ್ರೆ ಹೊರತು ಪಡಿಸಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಹೋಲಿಸಿದರೆ ನಮ್ಮಲ್ಲಿ ಮೂಳೆ ಮುರಿತದ ಆಪರೇಷನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತಿವೆ.