ಜಿಲ್ಲೆ

ವಿದ್ಯಾರ್ಥಿಗಳ ಜತೆ ಶರಣರ ಫೇಸ್‌ಬುಕ್ ಲೈವ್

Chitradurga

ಚಿತ್ರದುರ್ಗ: ಲಾಕ್‌ಡೌನ್ ವೇಳೆ ಫೇಸ್‌ಬುಕ್ ಲೈವ್ ಮೂಲಕ ಭಕ್ತರಿಗೆ ಮಾರ್ಗದರ್ಶನ ಮಾಡಿದ್ದ ಶ್ರೀ ಶಿವಮೂರ್ತಿ ಮುರುಘಾ ಶರಣರು ಒಂದು ಹೆಜ್ಜೆ ಮುಂದಿಟ್ಟು ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರಿಗೆ ಭಾನುವಾರ ಫೆಸ್‌ಬುಕ್ ಲೈವ್ ನಡೆಸಿದರು.

ಲೈವ್ ಕಾರ್ಯಕ್ರಮಕ್ಕೆ 650ಕ್ಕೂ ಹೆಚ್ಚು ಪ್ರಶ್ನೆಗಳು ಬಂದಿದ್ದವು. ಈ ಪೈಕಿ ಆಯ್ದ 25 ಪ್ರಶ್ನೆಗಳಿಗೆ ಶರಣರು ಫೇಸ್‌ಬುಕ್, ಯುಟ್ಯೂಬ್ ಚಾನೆಲ್‌ನಲ್ಲಿ ಉತ್ತರಿಸಿದರು.

ಪರಸ್ಪರ ಅಂತರದೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನಾವು ಸಿದ್ಧವಿದ್ದರೂ ಸೋಂಕಿನ ಭೀತಿ ಇದೆ ಎಂಬ ವಿದ್ಯಾರ್ಥಿಗಳ ಆತಂಕಕ್ಕೆ ಶರಣರು ಭಯ ಬಿಡಿ ಮುಂಜಾಗ್ರತೆ ವಹಿಸಿ ಪರೀಕ್ಷೆ ಎದುರಿಸಿ ಎಂದು ಧೈರ್ಯ ತುಂಬಿದರು.

ವಯಸ್ಕರು ನಿತ್ಯ ಒಂದಲ್ಲ ಒಂದು ಪರೀಕ್ಷೆ ಎದುರಿಸುತ್ತಾರೆ. ವಿದ್ಯಾರ್ಥಿಗಳು ಮುಂದಿನ ತರಗತಿಗೆ ಹೋಗಲು ವರ್ಷಕ್ಕೆ ಎರಡು ಬಾರಿ ಪರೀಕ್ಷೆ ಎದುರಿಸುವುದು ಅನಿವಾರ್ಯ ಎಂದು ಕಿವಿಮಾತು ಹೇಳಿದರು.

ನಾವೇನು ಪರೀಕ್ಷೆಗೆ ಹೆದರುತ್ತಿಲ್ಲ. ಆದರೆ, ಅಪ್ಪ, ಅಮ್ಮ ಅವರಿಗೆ ಕರೊನಾ ಆತಂಕ ಎಂಬ ಪ್ರಶ್ನೆಗೆ, ನೀವು ನಿರ್ಭಯದಿಂದ ಪರೀಕ್ಷೆ ಬರೆಯಿರಿ ಎಂದು ಶ್ರೀಗಳು ಆತ್ಮಸ್ಥೈರ್ಯ ತುಂಬಿದರು.

ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ಆಸಕ್ತಿ ಇಲ್ಲ ಎಂಬ ವಿದ್ಯಾರ್ಥಿಗೆ, ಆಸಕ್ತಿ ಕಳೆದುಕೊಳ್ಳಬೇಡ. ಯಾವುದೇ ಪತ್ರಿಕೆಯನ್ನು ಅಲಕ್ಷ್ಯ ಮಾಡದೆ ಓದಿನತ್ತ ಚಿತ್ತ ಹರಿಸಬೇಕು. ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಗೊಂದಲವಿರಬಹುದು. ವಿದ್ಯಾರ್ಥಿಗಳಲ್ಲಿ ಇರಬಾರದು ಎಂದು ಹೇಳಿದರು.

ಅಭ್ಯಾಸದಿಂದ ವಿಮುಖವಾಗದೆ ಸಮಯ ಸದುಪಯೋಗ ಮಾಡಿಕೊಳ್ಳಿ, ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ. ಪಠ್ಯವನ್ನು ಗಂಭೀರವಾಗಿ ಪರಿಗಣಿಸಿ ನೆನಪಿನಲ್ಲಿಟ್ಟುಕೊಳ್ಳಿ. ನೆನಪಿನ ಶಕ್ತಿಗೆ ಧ್ಯಾನ, ಏಕಾಗ್ರತೆ ಅಗತ್ಯ ಎಂದು ಸಲಹೆ ನೀಡಿದರು.

ಕರೊನಾ ಎಲ್ಲಿಲ್ಲದ ಅಸಹನೆ ಸೃಷ್ಟಿಸಿದೆ. ಜೀವನ ಪಾಠ ಹೇಳಿಕೊಟ್ಟಿದೆ. ವಸ್ತು, ವಾಹನ, ಸಮಯ, ಮಾನವ ಸಂಬಂಧ ಹಾಗೂ ಜೀವನದ ಬೆಲೆ ಹೇಳಿ ಕೊಟ್ಟಿದೆ. ಜೀವನವನ್ನು ಕೊಡಲು ಮತ್ತು ಕೊಡಿಸಲು ಬರುವುದಿಲ್ಲ. ಜೀವನ ಪ್ರೀತಿಯನ್ನು ಕಲಿತುಕೊಳ್ಳಿ. ಕೆಟ್ಟ ಆಲೋಚನೆ ಜತೆ ಇಂದ್ರೀಯಗಳು ಸಾಗಬಾರದು ಎಂದು ಶ್ರೀಗಳು ಹೇಳಿದರು.