ಜಿಲ್ಲೆ

1.90 ಲಕ್ಷ ಸಸಿ ನೆಡಲು ಗುರಿ

Chitradurga

ಚಿತ್ರದುರ್ಗ: ಜಿಲ್ಲೆಯ ಸಾಮಾಜಿಕ ಅರಣ್ಯ ಇಲಾಖೆ ಈ ಮಳೆಗಾಲದ ಒಳಗೆ ಜಿಲ್ಲಾದ್ಯಂತ ರಸ್ತೆ ಬದಿ, ಶಾಲಾ ಕಾಲೇಜು, ಸರ್ಕಾರಿ ಜಮೀನು, ಗೋಮಾಳ, ಲೇ ಔಟ್‌ಗಳು ಹಾಗೂ ಅರಣ್ಯ ಭೂಮಿಯಲ್ಲಿ 1.90 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಿದೆ.

ಕಳೆದ ವರ್ಷ ನರೇಗಾ, ಜಿಪಂ, ಗ್ರೀನಿಂಗ್ ಆಫ್ ಅರ್ಬನ್ ಏರಿಯಾ ಯೋಜನೆ, ರಸ್ತೆ ಬದಿ ಸಸಿ ನೆಡುವುದು, ರಾಜ್ಯ ಅರಣ್ಯ ಅಭಿವೃದ್ಧಿ ಇತ್ಯಾದಿ ಯೋಜನೆಗಳಡಿ ಜಿಲ್ಲೆಯ ನರ್ಸರಿಗಳಲ್ಲಿ ಅಂದಾಜು 8 ಲಕ್ಷ ಸಸಿ ಬೆಳೆಸಿ, ಅದರಲ್ಲಿ 6.40 ಲಕ್ಷ ಸಸಿಗಳನ್ನು ರೇಷ್ಮೆ ಇಲಾಖೆ ಹಾಗೂ ಸಾರ್ವಜನಿಕರಿಗೆ ವಿತರಿಸಲಾಗಿತ್ತು.

ಇಲಾಖೆಯಿಂದ ಜಿಲ್ಲೆಯಲ್ಲಿ ಅಂದಾಜು 2 ಲಕ್ಷ ಸಸಿ ನೆಡಲಾಗಿತ್ತು. ಹಸಿರು ಕರ್ನಾಟಕ ಯೋಜನೆಯಡಿ ರೈತರ ಜಮೀನಿನಲ್ಲಿ 65 ಸಾವಿರ ಗಿಡ ನೆಡುವ ಕೆಲಸ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಇಲಾಖೆಗೆ 10 ನರ್ಸರಿಗಳಿವೆ.

ಇಂದು ಕಾರ್ಯಕ್ರಮ: ಪರಿಸರ ದಿನಾಚರಣೆ ಅಂಗವಾಗಿ ಜೂ.5ರಂದು ಚಿತ್ರದುರ್ಗ ಗಾಯಿತ್ರಿ ಕಲ್ಯಾಣ ಮಂಟಪ ಸಮೀಪದ ರಸ್ತೆ ಬದಿಗಳಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಅರಣ್ಯಇಲಾಖೆ (ಸಾಮಾಜಿಕ) ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಕೆ.ಚೋಳರಾಜಪ್ಪ ತಿಳಿಸಿದ್ದಾರೆ.