ಜಿಲ್ಲೆ

ಲದ್ದಿಹುಳು ನಿರ್ಲಕ್ಷಿಸದರೆ ಮೆಕ್ಕೆಜೋಳ ಜಳ,ಜಳ

ಚಿತ್ರದುರ್ಗ: ಉತ್ತಮ ಇಳುವರಿ ನಿರೀಕ್ಷಿಸಿ ಬಿತ್ತನೆ ಮಾಡಲಾದ ಮುಸುಕಿನ ಜೋಳಕ್ಕೆ ಲದ್ದಿಹುಳು ಬಾಧೆ ಹೆಚ್ಚುತ್ತಿದ್ದು ಬೆಳೆಗಾರರಿಗೆ ಚಿಂತೆ ಆವರಿಸಿದೆ.

ಬಿತ್ತನೆ ಮಾಡಿ ವಾರೊಪ್ಪತ್ತು ಕಳೆಯುವುದರೊಳಗೆ ಲದ್ದಿಹುಳುಗಳು ದಾಳಿ ಇಟ್ಟಿರುವುದು ಸಹಜವಾಗಿ ರೈತರನ್ನು ಆತಂಕಕ್ಕೆ ದೂಡಿದೆ.

ರಾತ್ರಿ ವೇಳೆ 100 ಕಿಲೋ ಮೀಟರ್ ದೂರದವರೆಗೆ ಪ್ರಯಾಣಿಸಬಲ್ಲ ಈ ಹುಳುಗಳ ನಿರ್ವಹಣೆ ಹೇಗೆಂದು ರೈತರು ತಲೆ ಕೆಡಿಸಿಕೊಂಡಿದ್ದಾರೆ.

ಲದ್ದಿಹುಳು ಪ್ರಮುಖವಾಗಿ ಮೆಕ್ಕೆಜೋಳಕ್ಕೆ ತೊಂದರೆ ಕೊಡುವ ಕೀಟವಾದರೂ ಜೋಳ, ಭತ್ತ, ರಾಗಿ, ತರಕಾರಿ ಹಾಗೂ ಅಡಕೆ ಸಸಿಗಳಿಗೂ ಹಾನಿ ಮಾಡುತ್ತದೆ.

ಲದ್ದಿಹುಳುಗಳ ನಿಯಂತ್ರಣಕ್ಕೆ ಕೃಷಿ ಇಲಾಖೆ ರೈತರಿಗೆ ಹಲವು ಸಲಹೆ ನೀಡಿದ್ದು ಬೆಳೆ ಇರುವ ಅಥವಾ ಬೆಳೆ ಇಲ್ಲದ ಸಮಯದಲ್ಲಿ ಪ್ರತಿ ಎಕರೆಗೆ 5ರಂತೆ ಮೋಹಕ ಬಲೆಗಳನ್ನು ಅಳವಡಿಸಿ ಕೀಟಗಳನ್ನು ನಿಯಂತ್ರಿಸಲು ತಿಳಿಸಿದೆ.

ಬಿತ್ತನೆಗೆ ಮೊದಲು ಆಳವಾದ ಉಳುಮೆ ಮಾಡಬೇಕು.ಸಕಾಲದಲ್ಲಿ ಬಿತ್ತಬೇಕು. ಮುಸುಕಿನ ಜೋಳದಲ್ಲಿ ಆಯಾ ಪ್ರದೇಶಗಳಿಗೆ ಸೂಕ್ತವೆನಿಸುವ ಮಿಶ್ರಬೆಳೆ ಪದ್ಧತಿ ಅನುಸರಿಸಬೇಕು.

3-4 ವಾರಗಳ ಬೆಳೆಯಲ್ಲಿ ಶೇ.5 ಹಾಗೂ 5-7ವಾರಗಳ ಬೆಳೆಯಲ್ಲಿ ಶೇ.10-20 ಸಸಿಗಳು ಹಾನಿಯಾಗಿದ್ದರೆ ಕಾಳು ಕಟ್ಟುವ ಹಂತದಲ್ಲಿ ಯಾವುದೇ ಕೀಟನಾಶಕ ಬಳಸಬಾರದು. ಶೇ.10ಕ್ಕಿಂತ ಹೆಚ್ಚು ಹಾನಿಯಾಗಿದ್ದಲ್ಲಿ ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕು.

30 ದಿನಗಳವರೆಗೆ ಎಕರೆಗೆ 30ರಂತೆ ಪಕ್ಷಿಸೂಚಿಗಳನ್ನು ನೆಡಬೇಕು. ರಾಸಾಯ ನಿಕ ಗೊಬ್ಬರ ಬಳಸುವಾಗ ಸಮತೋಲನ ಕಾಯ್ದುಕೊಳ್ಳಬೇಕು.

ಮೊಟ್ಟೆ ಹಾಗೂ ಮೊದಲ ಹಂತದ ಮರಿಗಳಿರುವ ಎಲೆಗಳನ್ನು ಕೈಯಿಂದ ಕಿತ್ತು ನಾಶಪಡಿಸಬೇಕು. ಸಸ್ಯ ವೈವಿಧ್ಯತೆ ಕಾಪಾಡಬೇಕು. ದ್ವಿದಳ ಧಾನ್ಯ ಹಾಗೂ ಹೂವಿನ ಬೆಳೆಯಿಂದ ಕೀಟದ ಸ್ವಾಭಾವಿಕ ಶತ್ರುಗಳಿಗೆ ಆಶ್ರಯ ನೀಡಬಹುದು.

ನಿಯಂತ್ರಣ ಕ್ರಮಕ್ಕೂ ಮುನ್ನ ತಜ್ಞರ ಸಲಹೆ ಪಡೆಯುವಂತೆ ಕೃಷಿ ಇಲಾಖೆ ರೈತರಿಗೆ ಮನವಿ ಮಾಡಿದೆ. ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆ ಕಚೇರಿ ಸಂಪರ್ಕಿಸಬಹುದು.

ಮೋಡ ಕವಿದ ವಾತಾವರಣ, ತೇವಾಂಶ ಹೆಚ್ಚಿರುವ, ಉಷ್ಣಾಂಶ ಕಡಿಮೆ ಇರುವ ಪ್ರದೇಶಗಳಲ್ಲಿ ಇವುಗಳ ಹಾವಳಿ ಹೆಚ್ಚು. ವರ್ಷವಿಡೀ ಇವು ಬೆಳೆಗಳಿಗೆ ಹಾನಿ ಮಾಡಬಲ್ಲವು.

ಚಿತ್ರದುರ್ಗ ತಾಲೂಕಿನಲ್ಲಿ ಈಗಾಗಲೇ ಮುಸುಕಿನ ಜೋಳದ ಬೆಳೆಗೆ ಮೊದಲ ಹಾಗೂ ಎರಡನೇ ಹಂತದಲ್ಲಿ ಲದ್ದಿಹುಳು ಬಾಧೆ ಕಾಣಿಸಿದೆ. ಮೂರನೇ ಹಂತಕ್ಕೆ ತಲುಪಿದರೆ ಬೆಳೆ ಹಾನಿ ಖಚಿತ. ರೈತರು ಒಂದು ವಾರ-ಹತ್ತು ದಿನಗಳಿಗೆ ಒಮ್ಮೆ ಸೂಕ್ತ ಕೀಟನಾಶಕ ಬಳಸಿದರೆ ಶೇ.100 ಪ್ರಮಾಣದಲ್ಲಿ ಬೆಳೆ ಕಾಪಾಡಿಕೊಳ್ಳಬಹುದು.
ಭಾರತಮ್ಮ, ಸಹಾಯಕ ಕೃಷಿ ನಿರ್ದೇಶಕರು, ಚಿತ್ರದುರ್ಗ