ಚಿತ್ರದುರ್ಗ: ಭಾನುವಾರ ಸಂಭವಿಸಿದ ಕಂಕಣ ಸೂರ್ಯಗ್ರಹಣ ವೀಕ್ಷಿಸುವ ಕಾತರದಲ್ಲಿದ್ದ ಜನರಿಗೆ ಮೋಡ ಕವಿದ ವಾತಾವರಣ ಹಾಗೂ ಆಗಾಗ್ಗೆ ಸುರಿದ ತುಂತುರು ಮಳೆ ಅಡ್ಡಿ ತರಿಸಿತು.
ಗ್ರಹಣ ಹಿನ್ನೆಲೆಯಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಬೆಳಗ್ಗಿನಿಂದಲೇ ಮುಚ್ಚಿದ್ದರಿಂದ, ಜನರು ಕೂಡ ಹೊರಗೆ ಬಾರದ್ದರಿಂದ ಹಿಂದಿನ ಲಾಕ್‌ಡೌನ್ ಅವಧಿಯನ್ನು ನೆನಪಿಸುವಂತಿತ್ತು!
ನಗರದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ವಿಶೇಷ ಕನ್ನಡಕಗಳನ್ನು ಕೈಲಿಡಿದು ಕಾದಿದ್ದ ಕೆಲವರಿಗೆ ಬೆಳಗ್ಗೆ ಕೆಲವು ನಿಮಿಷಗಳ ಕಾಲ ಖಗೋಳದ ಕೌತುಕ ಕಣ್ಣಿಗೆ ಕಂಡಿತು. ಆನಂತರ ಎರಡು ತಾಸಿಗೂ ಹೆಚ್ಚು ಕಾಲ ಮೋಡದ ಮರೆಯಲ್ಲೇ ಭಾಸ್ಕರ ಸರಿದಾಡಿದ. ಕಡೇ ಗಳಿಗೆಯಲ್ಲಿ ಮತ್ತೆ ದರ್ಶನ ಪ್ರಾಪ್ತಿಯಾಯಿತು.
ಮುರುಘಾ ಮಠ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಕರ್ನಾಟಕ ವಿಜ್ಞಾನ ಪರಿಷತ್, ವಿಜ್ಞಾನ ಕೇಂದ್ರದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಒಂದೆಡೆ ಕರೊನಾ, ಇನ್ನೊಂದೆಡೆ ಮಳೆ ಭೀತಿ ನಡುವೆಯೂ ಜನರ ಸಂಖ್ಯೆ ಕೂಡ ಕಡಿಮೆ ಸಂಖ್ಯೆಯಲ್ಲಿತ್ತು. ಗ್ರಹಣ ಕಾಲದಲ್ಲಿ ಆಹಾರ ಸೇವನೆ ಮಾಡಬಾರದೆಂಬ ಮೌಠ್ಯ ತೊಡೆಯಲು ಲಘು ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು.
ಮುರುಘಾ ಮಠ, ಸರ್ಕಾರಿ ವಿಜ್ಞಾನ ಕಾಲೇಜ್ ಆವರಣದಲ್ಲಿ ಗ್ರಹಣ ವೀಕ್ಷಣೆಗೆ ವಿಶೇಷ ಕನ್ನಡಕಗಳ ವ್ಯವಸ್ಥೆ ಹಾಗೂ ಕ್ಯಾಮರಾ ಅಳವಡಿಸಲಾಗಿತ್ತು. ಮೋಡ ಮುಸುಕಿದನ ವಾತಾವರಣವಿದ್ದ ಕಾರಣಕ್ಕೆ ಪೂರ್ಣ ಪ್ರಮಾಣದಲ್ಲಿ ನೋಡಲು ಸಾಧ್ಯವಾಗಲಿಲ್ಲ.
ದೇವಸ್ಥಾನಗಳಲ್ಲಿ ಪೂಜೆ: ಗ್ರಹಣ ಹಿನ್ನೆಲೆಯಲ್ಲಿ ಕೆಲವು ದೇವಸ್ಥಾನಗಳಲ್ಲಿ ಮಧ್ಯಾಹ್ನದವರೆಗೆ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಮನೆಗಳಲ್ಲಿಯೂ ಜನರು ಗ್ರಹಣ ಬಳಿಕ ವಿಶೇಷ ಪೂಜೆ ಸಲ್ಲಿಸಿದರು. ಗ್ರಹಣ ಬಿಟ್ಟ ನಂತರ ಮನೆ, ದೇವಾಲಯಗಳನ್ನು ಶುಚಿಗೊಳಿಸಿ ಪೂಜೆ, ಅಭಿಷೇಕ ನಡೆಸಲಾಯಿತು.
ಆಧುನೀಕತೆ ಕಾಲದಲ್ಲೂ ಅಕ್ಷರವಂತರಲ್ಲಿ ಗ್ರಹಣ ಕುರಿತು ಮೌಢ್ಯ ಇರುವುದು ಸರಿಯಲ್ಲ. ಜನತೆ ಇದರಿಂದ ಹೊರಬರಬೇಕು. ಗ್ರಹಣವು ನೈಸರ್ಗಿಕ ಪ್ರಕ್ರಿಯೆ ಆಗಿದೆ. ಇದನ್ನು ನೋಡುತ್ತಲೇ ವಿಜ್ಞಾನದ ತಿಳಿವಳಿಕೆ ಬೆಳೆಸಿಕೊಳ್ಳಬೇಕು, ಮಕ್ಕಳಲ್ಲಿ ವಿಜ್ಞಾನ ಕುರಿತು ಆಸಕ್ತಿ ಬೆಳೆಸಬೇಕೆ ಹೊರತು ಮೂಢನಂಬಿಕೆ ಬಿತ್ತಬಾರದು.
> ಜೆ.ಯಾದವರೆಡ್ಡಿ
ಚಿಂತಕರು, ಚಿತ್ರದುರ್ಗ