ಜಿಲ್ಲೆ

ಹಿರಿಯ ನಾಗರಿಕರ ಹಕ್ಕು, ಸೌಲಭ್ಯಗಳ ಜಾಗೃತಿಗೆ ಡಿಸಿ ತಾಕೀತು

Chitradurga

ಚಿತ್ರದುರ್ಗ: ಪಾಲಕರ ಪೋಷಣೆ ಸಂರಕ್ಷಣೆ, ಹಿರಿಯ ನಾಗರಿಕರ ರಕ್ಷಣೆ ಕಾಯ್ದೆ 2007, ಹಕ್ಕು ಹಾಗೂ ಸೌಲಭ್ಯಗಳ ಕುರಿತ ಜಾಗೃತಿಗೆ ಜಿಲ್ಲಾಧಿಕಾರಿ ಆರ್.ವಿನೋತ್‌ಪ್ರಿಯಾ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಪ್ರಗತಿ ಪರಿಶೀಲಿಸಿ ಮಾತನಾಡಿದರು.

ಹಿರಿಯ ನಾಗರಿಕರಿಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಸಹಿತ ಆರೋಗ್ಯ ಸೇವೆ, ಸಹಾಯವಾಣಿ 1090, ಸಾರಿಗೆ ಸೇವೆಗಳ ಮಾಹಿತಿ ಫಲಕಗಳನ್ನು ಜನದಟ್ಟಣೆ ಪ್ರದೇಶಗಳಲ್ಲಿ ಹಾಕಬೇಕು. ಮದ್ಯ ಮತ್ತು ಮಾದಕ ವ್ಯಸನಮುಕ್ತ ಕೇಂದ್ರದ ಬಗ್ಗೆಯೂ ಪ್ರಚಾರ ಮಾಡಬೇಕು ಎಂದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಾತನಾಡಿ, ಕೌಟುಂಬಿಕ ಅಥವಾ ಆಸ್ತಿ ಸಮಸ್ಯೆ ಇದ್ದರೆ ಹಿರಿಯ ನಾಗರಿಕರು ದೂರು ನೀಡಬಹುದು. ಕೌಟುಂಬಿಕ ಸಮಸ್ಯೆ ಇತ್ಯರ್ಥಕ್ಕೆ ನ್ಯಾಯಮಂಡಳಿ ರಚಿಸಲಾಗಿದೆ. ಇದರಲ್ಲಿ ದಾಖಲಾಗಿರುವ 7 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.

ಹಿರಿಯ ನಾಗರಿಕರ ಗುರುತಿನ ಚೀಟಿಗಳನ್ನು ಆನ್‌ಲೈನ್‌ನಲ್ಲೂ ಪಡೆಯಬಹುದು. ರಾಷ್ಟ್ರೀಯ ದತ್ತುನಿಧಿ ಕಾಯ್ದೆ 1999 ರಡಿ 18 ವರ್ಷ ವಯಸ್ಸು ಮೀರಿದ ಬುದ್ಧಿಮಾಂದ್ಯತೆ ಮತ್ತು ಬಹುವಿಧದ ಅಂಗವಿಕಲತೆ ಹೊಂದಿದವರಿಗೆ ಪೋಷಕತ್ವ ಪ್ರಮಾಣ ಪತ್ರ ಒದಗಿಸಲಾಗುವುದು. ಜಿಲ್ಲೆಯಲ್ಲಿ ಮದ್ಯ ಮತ್ತು ಮಾದಕ ವ್ಯಸನ ನಿವಾರಣಾ ಚಿಕಿತ್ಸಾ ಕೇಂದ್ರವಿದೆ ಎಂದರು.

ಜಿಲ್ಲೆಗೆ ಪ್ರಥಮ: ಅಂಗವಿಕಲರ ವಿಶಿಷ್ಟ ಗುರುತಿನ ಚೀಟಿ(ಯುಡಿಐಡಿ)ನೋಂದಣಿ ಹಾಗೂ ವಿತರಣೆಯಲ್ಲಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. 8 ತಿಂಗಳಿಂದ ಜಿಲ್ಲೆಯಲ್ಲಿ ಸ್ವೀಕರಿಸಿರುವ 16620 ಅರ್ಜಿದಾರರ ಪೈಕಿ, 9966 ಜನರಿಗೆ ಯುಡಿಐಡಿ ಕಾರ್ಡ್ ವಿತರಿಸಲಾಗಿದೆ ಎಂದು ವೈಶಾಲಿ ತಿಳಿಸಿದರು. 2011ರ ಜನಗಣತಿಯಂತೆ ಜಿಲ್ಲೆಯಲ್ಲಿ 35,971 ಅಂಗವಿಕಲರಿದ್ದು, ಯುಡಿಐಡಿ ಕಾರ್ಡ್ ನೋಂದಣಿಗಾಗಿ ಗ್ರಾಮೀಣ ಮತ್ತು ನಗರ ಪುನರ್ವಸತಿ ಕಾರ್ಯಕರ್ತರ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು.