ಜಿಲ್ಲೆ

ಶುದ್ಧ ಕುಡಿವ ನೀರು ಸೇವಣೆಯ ಅರಿವು ಮೂಡಿಸಿ

Chitradurga

ಚಿತ್ರದುರ್ಗ: ಶುದ್ಧ ನೀರು ಕುಡಿಯಲು ಜನರಲ್ಲಿ ಅರಿವು ಮೂಡಿಸಬೇಕೆಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಗ್ರಾ.ಕು.ನೀರು ಮತ್ತು ನೈರ್ಮಲ್ಯಇಲಾಖೆ ಅಧಿಕಾರಿ, ಗ್ರಾಪಂ ಪಿಡಿಒಗಳಿಗೆ ಸೂಚಿಸಿದರು.

ಮಂಗಳವಾರ ತಾಪಂ ಕಚೇರಿಯಲ್ಲಿ ಪ್ರಗತಿ ಪರಿಶೀಲಿಸಿ ಮಾತನಾಡಿದರು.

ತುರುವನೂರು ಹೋಬಳಿಯ ಆರು ಗ್ರಾಪಂ ವ್ಯಾಪ್ತಿಯ ಆರ್‌ಒಗಳ ನಿರ್ವಹಣೆ ಕುರಿತ ಚರ್ಚೆ ವೇಳೆ, ಕೆಲವೆಡೆ ಆರ್‌ಒ ಸರಿ ಇದ್ದರೂ ಶುದ್ಧ ನೀರನ್ನು ಕುಡಿಯಲು ಜನ ಮುಂದೆ ಬರುತ್ತಿಲ್ಲವೆಂದು ಪಿಡಿಒಗಳು ತಿಳಿಸಿದ್ದಾರೆ. ಆ ನೀರು ಸಪ್ಪೆ ಇರುತ್ತದೆ ಎಂಬ ಕಾರಣಕ್ಕೆ ನಿರಾಕರಿಸಿರಬಹುದು. ಆದರೆ ಶುದ್ಧ ನೀರಿನ ಸೇವನೆಯ ಲಾಭವನ್ನು ಜನರಿಗೆ ತಿಳಿಸಬೇಕೆಂದರು.

ಇಲಾಖೆ ಇಇ ಹನುಮಂತಪ್ಪ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ ಶಾಸಕರು, ಗುತ್ತಿಗೆದಾರನಿಗೆ ಹೇಳಿ ಕೂಡಲೇ ಮೆಂಬ್ರಿಂಗ್ ತರಿಸಿ, ಪಾಸ್ ಅಗತ್ಯವಿದ್ದರೆ ಡಿಸಿಯಿಂದ ಕೊಡಿಸಿ. ಹೊಸ ಆರ್‌ಒ ಸ್ಥಾಪನೆಯ ಟೆಂಡರ್ ಬೇಗ ಪೂರ್ಣಗೊಳಿಸಿ ಎಂದು ಸೂಚಿಸಿದರು. ಆರ್‌ಒ ಘಟಕಗಳ ಮಾಹಿತಿ ಕೊಡುತ್ತಿದ್ದ ಜೆಇ ಶಿವಮೂರ್ತಿ ಅವರಿಗೆ, ನೀವು ಫೀಲ್ಡ್‌ನಲ್ಲಿ ಓಡಾಡಿ ಸಮಸ್ಯೆ ಬಗೆಹರಿಸಿ ಎಂದರು.

ಮುದ್ದಾಪುರ, ಹೊಸಹಟ್ಟಿ ನೀರಿನ ಸಮಸ್ಯೆ ಕುರಿತಂತೆ ಇಒ ಕೃಷ್ಣನಾಯ್ಕರನ್ನು ತರಾಟೆಗೆ ತೆಗೆದುಕೊಂಡರು. ನಾಳೆಯಿಂದಲೇ ಹೊಸ ಹಟ್ಟಿಗೆ ಟ್ಯಾಂಕರ್ ನೀರು ಪೂರೈಸುವುದಾಗಿ ಇಒ ಹೇಳಿದರು.

ಇದೊಂದು ವರ್ಷ ನೀರಿನ ಸಮಸ್ಯೆ ಬರದಂತೆ ನೋಡಿಕೊಳ್ಳಿ. ಮುಂದಿನ ವರ್ಷದಿಂದ ತುಂಗಭದ್ರಾ ಹಿನ್ನೀರು ಪೂರೈಕೆ ಆಗುತ್ತದೆ. ಕರೊನಾ ಪರಿಸ್ಥಿತಿ ಸುಧಾರಿಸುವವರೆಗೂ ಆರ್‌ಒ ನೀರಿಗೆ 2 ರೂ.ಪಡೆಯಿರಿ. ಇದಕ್ಕೆ ಜಿಪಂ ಸಿಇಒ ಕೂಡ ಒಪ್ಪಿದ್ದಾರೆ. ಸರ್ಕಾರಿ ಆರ್‌ಒಗಳನ್ನು ದುರುದ್ದೇಶದಿಂದ ಹಾನಿ ಮಾಡುವವರ ವಿರುದ್ಧ ಪೊಲೀಸರಿಗೆ ದೂರ ಕೊಡಿ. ಯಾವುದೇ ಮುಲಾಜು ಬೇಡ ಎಂದು ಪಿಡಿಒಗಳಿಗೆ ಸೂಚಿಸಿದರು.

ಹಗಲಲ್ಲೇ ಬೆಳಗುವ ಬೀದಿ ದೀಪ: ಟ್ರಾನ್ಸ್‌ಫಾರಂ ಬಳಿ ಜಂಗಲ್‌ಕಟ್ಟಿಂಗ್ ಆಂದೋಲನ ಹಮ್ಮಿಕೊಳ್ಳಿ. ಹಗಲು ವೇಳೆ ಬೀದಿ ದೀಪಗಳು ಬೆಳಗದಂತೆ, ಟಿಸಿ ಸ್ಥಳಾಂತರ ಅಥವಾ ದುರಸ್ತಿ ಬೇಡಿಕೆ ಇದ್ದರೆ ಕೂಡಲೇ ಕ್ರಮ ತೆಗೆದುಕೊಳ್ಳಿ. ಟಿಸಿ ಸ್ಥಳಾಂತರಕ್ಕೆ ಗ್ರಾಪಂಗಳಿಗೆ ಶುಲ್ಕ ವಿಧಿಸದಂತೆ ಬೆಸ್ಕಾಂ ಎಇಇ ರಮೇಶ್ ಗೆ ತಿಳಿಸಿದರು.

ಕ್ವಾರಂಟೈನ್: ಪರಸ್ಥಳಗಳಿಂದ ಬಂದವರ ಕ್ವಾರಂಟೈನ್‌ಗೆ ಸಾಧ್ಯವಾದಷ್ಟು ಜನ ವಸತಿಯಿಂದ ದೂರವಿರುವ ಹಾಸ್ಟೆಲ್‌ಗಳನ್ನು ಗುರುತಿಸುವಂತೆ ತಾಲೂಕು ವೈದ್ಯಾಧಿಕಾರಿ ಬಿ.ವಿ.ಗಿರೀಶ್‌ಗೆ ಸೂಚಿಸಿದರು. ಶಿಥಿಲಗೊಂಡಿರುವ ಬೆಳಘಟ್ಟ ಗ್ರಾಪಂ ಕಚೇರಿಗೆ ತಾತ್ಕಾಲಿಕವಾಗಿ ಆರೋಗ್ಯ ಇಲಾಖೆ ಕಟ್ಟಡವನ್ನು ಬಿಟ್ಟುಕೊಡುವಂತೆ ತಿಳಿಸಿದರು. ತಾಪಂ ಅಧ್ಯಕ್ಷ ಡಿ.ಎಂ.ಲಿಂಗರಾಜು ವಿವಿಧ ಇಲಾಖೆ ಅಧಿಕಾರಿಗಳಿದ್ದರು.