ಜಿಲ್ಲೆ

ಜೀವ ಸಂಕುಲದ ಉಳಿವು ಸರ್ವರ ಹೊಣೆ

Chitradurga

ಚಿತ್ರದುರ್ಗ: ಜಗತ್ತಿನಲ್ಲಿ ಮಾನವ ಒಬ್ಬನೇ ಬದುಕಬೇಕೆಂಬ ಸ್ವಾರ್ಥದ ನಡೆ ಇಂದಿನ ಮಹಾಮಾರಿ ರೋಗಗಳ ಹಾವಳಿಗೆ ಕಾರಣ ಎಂದು ನಿವೃತ್ತ ಡಿಡಿಪಿಐ ಮಂಜುನಾಥ್ ಆತಂಕ ವ್ಯಕ್ತಪಡಿಸಿದರು.

ಪ್ರತಿದಿನ ಪ್ರಾಣಿಪಕ್ಷಿಗಳಿಗೆ ನೀರು, ಆಹಾರ ಒದಗಿಸುವ ಪೈಲ್ವಾನ್ ಭೈರಪ್ಪ ಅವರಿಗೆ ಇನ್ನರ್ ವ್ಹೀಲ್ ಕ್ಲಬ್, ಮಾತೃಶ್ರೀ ಸಂಸ್ಥೆಯಿಂದ ಜೋಗಿಮಟ್ಟಿ ರಸ್ತೆಯ ಅನ್ನಪೂರ್ಣೇಶ್ವರಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾನವನ ಬದುಕು ಪರಿಸರದ ಉಳಿವನ್ನು ಅವಲಂಬಿಸಿದೆ. ಬೃಹತ್ ಮನೆ ನಿರ್ಮಿಸಿಕೊಳ್ಳುವ ನಾವು ಮನೆ ಮುಂದೆ ಒಂದೆರಡು ಗಿಡ ನೆಡಲು ಹಾಗೂ ಪ್ರಾಣಿ, ಪಕ್ಷಿಗಳ ಉಳಿವು ಕುರಿತು ಚಿಂತನೆ ನಡೆಸುವುದಿಲ್ಲ. ಇದರಿಂದ ಕರೊನಾ ಸೇರಿ ವಿವಿಧ ರೀತಿ ರೋಗಗಳಿಗೆ ಭೀತಿ ಪಡಬೇಕಾಗಿದೆ ಎಂದು ತಿಳಿಸಿದರು.

ಮುಖಂಡ ಮಹಾಂತೇಶ್ ಮಾತನಾಡಿ, ಸ್ವಚ್ಛತೆ ಕಾರ್ಯ ನಗರಸಭೆ ಸೇರಿ ಸ್ಥಳೀಯ ಸಂಸ್ಥೆಗಳದ್ದು ಮಾತ್ರ ಎಂಬ ಮನಸ್ಥಿತಿಯಿಂದ ಹೊರಬರಬೇಕು. ಸ್ವಚ್ಛತೆ ಕುರಿತು ಜಾಗೃತಿ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕ್ಲಬ್ ಅಧ್ಯಕ್ಷೆ ರೀನಾ ವೀರಭದ್ರಪ್ಪ, ಸದಸ್ಯೆ ಶೀಲಾ ನರೇಂದ್ರ ಮಾತನಾಡಿ, ಪೈಲ್ವಾನ್ ಭೈರಪ್ಪ ಕೇವಲ ಕುಸ್ತಿ ಕ್ರೀಡೆಗೆ ಸೀಮಿತವಾಗದೆ ಪ್ರಾಣಿ-ಪಕ್ಷಿಗಳಿಗೆ ನಿತ್ಯ ನೀರು ಆಹಾರ ಒದಗಿಸುವ ಮಾನವೀಯ ಕಾರ್ಯ ನಡೆಸುತ್ತಿರುವುದು ಮಾದರಿ ಎಂದರು.

ಸದಸ್ಯರಾದ ರೂಪಾ ಗಿರೀಶ್, ಸರಸ್ವತಿ ರವಿಶಂಕರ್, ಎನ್.ನೇತ್ರಾ ಗೌಡ, ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ಇತರರಿದ್ದರು.