ಚಿತ್ರದುರ್ಗ: ‘ನಿಮ್ಮನ್ನು ರಾಜಸ್ತಾನಕ್ಕೆ ಕಳುಹಿಸಲು ಸಾಧ್ಯವಿಲ್ಲ, ನಿಮ್ಮ ಪತ್ನಿಗೆ ಹೆರಿಗೆ ಮಾಡಿಸುವ ಜವಾಬ್ದಾರಿ ನಮಗಿರಲಿ..’
ಗುರುವಾರ ತಮ್ಮ ಬಳಿ ಅಲವತ್ತುಕೊಂಡ ರಾಜಸ್ತಾನ ಮೂಲದ ವ್ಯಕ್ತಿಯೊಬ್ಬರಿಗೆ ಎಸ್‌ಪಿ ಕೆ.ರಾಧಿಕಾ ಪ್ರತಿಕ್ರಿಯಿಸಿದ್ದು ಹೀಗೆ.
ವಲಸೆ ಕಾರ್ಮಿಕರಿಗೆ ನೀಡಲಾದ ವ್ಯವಸ್ಥೆಗಳ ಪರಿಶೀಲನೆಗೆಂದು ಚಿತ್ರದುರ್ಗ ಗಾಂಧಿನಗರದ ಹಾಸ್ಟೆಲ್‌ಗೆ ಎಸ್ಪಿ ಭೇಟಿ ನೀಡಿದ ಸಂದರ್ಭದಲ್ಲಿ ರಾಜಸ್ತಾನ ಮೂಲದ ವ್ಯಕ್ತಿ ‘ನನ್ನ ಪತ್ನಿ ಗರ್ಭಿಣಿಯಾಗಿದ್ದು ಹುಟ್ಟೂರಿಗೆ ಹೋಗಲು ಅವಕಾಶ ನೀಡಿ’ ಎಂದು ಸಮಸ್ಯೆ ತೋಡಿಕೊಂಡನು.
ದೇಶವನ್ನೇ ಸಂಕಷ್ಟಕ್ಕೆ ದೂಡಿರುವ ಕರೊನಾ ವೈರಸ್‌ಗೆ ಕಡಿವಾಣ ಹಾಕಲು ಸಕಲ ಪ್ರಯತ್ನ ನಡೆಯುತ್ತಿದೆ. ಇಲ್ಲಿ ವೈಯಕ್ತಿಕ ಹಿತಾಸಕ್ತಿ, ಆಸೆಗಳಿಗೆ ಮನ್ನಣೆ ಇಲ್ಲ. ಎಲ್ಲರೂ ಹೀಗೆ ಹಟ ಮಾಡಿದರೆ ಸಮಸ್ಯೆ ನಿಭಾಯಿಸಲು ಸರ್ಕಾರದಿಂದ ಆಗುವುದಿಲ್ಲ ಎಂದು ಗರಂ ಆಗಿಯೇ ಉತ್ತರಿಸಿದರು.
ಅಲ್ಲಿನ (ರಾಜಸ್ಥಾನ) ಜಿಲ್ಲಾಧಿಕಾರಿ-ಎಸ್ಪಿ ಜತೆ ಮಾತನಾಡುತ್ತೇನೆ, ಅಂಬ್ಯುಲೆನ್ಸ್‌ನಲ್ಲಿ ನಿಮ್ಮ ಹೆಂಡತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆರಿಗೆ ಮಾಡಿಸುವ ವ್ಯವಸ್ಥೆ ಮಾಡಿಸುತ್ತೇನೆ. ಲಾಕ್‌ಡೌನ್ ಮುಗಿಯುವವರೆಗೂ ನಿಶ್ಚಿಂತೆಯಿಂದ ಇಲ್ಲಿರಿ. ನಿಮಗೆ ಊಟ, ವಸತಿ ಯಾವುದಕ್ಕೂ ಸಮಸ್ಯೆಯಾಗದಂತೆ ಜಿಲ್ಲಾಡಳಿತ ನೋಡಿಕೊಳ್ಳುತ್ತದೆ ಎಂದು ಎಸ್ಪಿ ಭರವಸೆ ನೀಡಿದರು.
ತಮ್ಮೂರಿಗೆ ಹೋಗಬೇಕೆಂಬುದು ಎಲ್ಲರದ್ದೂ ಆಸೆ ಆಗಿರುತ್ತದೆ. ಈಗಿನ ಸಂಕಷ್ಟದ ಪರಿಸ್ಥಿತಿಯನ್ನು ಎಲ್ಲರೂ ಅರಿತುಕೊಳ್ಳಬೇಕು. ಕರೊನಾದಿಂದ ದೇಶ, ನಾವೆಲ್ಲರೂ ಉಳಿಯಬೇಕಾದರೆ ಪ್ರತಿಯೊಬ್ಬರ ಸಹಕಾರ ಅಗತ್ಯ. ಇಲ್ಲಿಂದ ಅಲ್ಲಿಗೆ ಹೋದರೆ ಜನರೂ ಸಂಶಯದಿಂದ ನೋಡುತ್ತಾರೆ. ಊರಿಗೆ ಸೇರಿಸಿಕೊಳ್ಳುವುದಿಲ್ಲ. ರಸ್ತೆ ಮಧ್ಯೆ ಅನೇಕ ಅಡೆತಡೆಗಳು ಎದುರಾಗುತ್ತವೆ. ಸಮಸ್ಯೆಗೆ ಸಿಲುಕುವ ಬದಲು ಇಲ್ಲಿಯೇ ನೆಮ್ಮದಿಯಿಂದ ಇರುವಂತೆ ಸಲಹೆ ನೀಡಿದರು.