ಚಿತ್ರದುರ್ಗ: ಚಳ್ಳಕೆರೆ ಶಾಲೆಯೊಂದರಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದ ಉತ್ತರ ಪ್ರದೇಶ ಗೋರಕ್‌ಪುರ ಜಿಲ್ಲೆ 25 ವರ್ಷದ ವಾಹನ ಚಾಲಕನಿಗೆ (ಪಿ-1630) ಕೋವಿಡ್-19 ಸೋಂಕಿರುವುದು ಶುಕ್ರವಾರದ ವರದಿಯಲ್ಲಿ ದೃಢಪಟ್ಟಿದೆ ಎಂದು ಡಿಸಿ ಆರ್.ವಿನೋತ್ ಪ್ರಿಯಾ ತಿಳಿಸಿದ್ದಾರೆ.
ಚೆನ್ನೈನಿಂದ ಮೇ 14ರಂದು ವಾಹನದಲ್ಲಿ ಹೊಸೂರು, ಚಿಕ್ಕಬಳ್ಳಾಪುರ, ಪಾವಗಡ ಮಾರ್ಗ ಪ್ರಯಾಣಿಸುತ್ತಿದ್ದ 59 ಜನ ಕಾರ್ಮಿಕರನ್ನು ಮೇ 15ರಂದು ಚಳ್ಳಕೆರೆ ಗಡಿ ನಾಗಪ್ಪನಹಳ್ಳಿ ಗೇಟ್‌ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ವಶಕ್ಕೆ ಪಡೆದು, ಪೂರ್ವಾನುಮತಿ ಇಲ್ಲದೆ ಪ್ರಯಾಣಿಸುತ್ತಿದ್ದ ಕಾರಣಕ್ಕೆ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಿದ್ದರು.
ಚಾಲಕನಲ್ಲಿ ಜ್ವರ ಕಂಡು ಬಂದಿದ್ದರಿಂದಾಗಿ ಆತನ ಗಂಟಲು ದ್ರವವನ್ನು ಮೇ 18ರಂದು ಪರೀಕ್ಷೆಗೆ ಕಳಿಸಲಾಗಿತ್ತು. ಸೋಂಕಿತನನ್ನು ಈಗ ಚಿತ್ರದುರ್ಗದ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ.
ಈತನ ಜತೆ ವಾಹನದಲ್ಲಿದ್ದ ಎಲ್ಲ 58 ಜನರನ್ನೂ ಪ್ರಾಥಮಿಕ ಸಂಪರ್ಕಿತರೆಂದು ಪರಿಗಣಿಸಿ ಸಾಂಸ್ಥಿಕ ಕ್ವಾರಂಟೈನಲ್ಲಿ ಮುಂದುವರಿಸಲಾಗಿದೆ.
ಕ್ವಾರಂಟೈನ್ ಸಿಬ್ಬಂದಿ ಗಂಟಲು ದ್ರವ ಮಾದರಿಯನ್ನು ಶುಕ್ರವಾರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಕಾರ್ಮಿಕರ ಹಾಗೂ ಸಿಬ್ಬಂದಿಯ ದ್ವಿತೀಯ ಹಂತದ ಸಂಪರ್ಕಿತರ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಸದ್ಯಕ್ಕೆ ಸೋಂಕಿತ ಸಂಖ್ಯೆ 11ಕ್ಕೆ ಏರಿದ್ದು, ಒಬ್ಬರು ಗುಣಮುಖರಾಗಿದ್ದಾರೆ. 10 ಜನರ ಪೈಕಿ ಒಬ್ಬರು ಮಣಿಪಾಲ್ ಆಸ್ಪತ್ರೆಯಲ್ಲಿ, ಇನ್ನುಳಿದವರು ಚಿತ್ರದುರ್ಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಡಿಸಿ ತಿಳಿಸಿದ್ದಾರೆ.