ಚಿತ್ರದುರ್ಗ: ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್‌ಗೆಂದು ಹೊಸದಿಲ್ಲಿಗೆ ಹೋಗಿ ಮರಳಿ ಬಂದು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದ ಧರ್ಮಪುರ ಹೋಬಳಿ 23 ವರ್ಷ ವಯಸ್ಸಿನ ಯುವಕನಲ್ಲಿ (ಪಿ-2584) ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ತಿಳಿಸಿದ್ದಾರೆ.
ಲಾಕ್‌ಡೌನ್ ಸಡಿಲಿಕೆ ನಂತರ ಮೇ 14ರಂದು ದಿಲ್ಲಿಯಿಂದ ಹೊರಟು 15ರಂದು ಹುಬ್ಬಳ್ಳಿಗೆ ಬಂದಿದ್ದ. ಈತನೊಂದಿಗೆ ಜಿಲ್ಲೆಯ ಚಿತ್ರದುರ್ಗ, ಹೊಸದುರ್ಗ, ಮೊಳಕಾಲ್ಮೂರು ಹಾಗೂ ಹೊಳಲ್ಕರೆ ತಾಲೂಕಿನ ಇತರೆ 12 ವಿದ್ಯಾರ್ಥಿ ಹಾಗೂ ವಲಸೆ ಕಾರ್ಮಿಕರಿದ್ದರು. 16ರಂದು 12 ಜನರು ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಚಿತ್ರದುರ್ಗಕ್ಕೆ ಬಂದಿದ್ದರು.
ಈ ಬಗ್ಗೆ ಮೊದಲೇ ಮಾಹಿತಿ ಹೊಂದಿದ್ದ ಜಿಲ್ಲಾಡಳಿತ, 12 ಜನರನ್ನೂ ಅವರವರ ತಾಲೂಕುಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಿಸಿತ್ತು. 24ರಂದು 2ನೇ ಬಾರಿಗೆ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು.
ಸೋಂಕಿತನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಕೋವಿಡ್ ಹೆಲ್ತ್‌ಕೇರ್ ಸೆಂಟರ್‌ಗೆ ದಾಖಲಿಸಲಾಗಿದೆ. ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕಿತರು ಹಾಗೂ ದ್ವಿತೀಯ ಹಂತದ ವ್ಯಕ್ತಿ ಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಡಿಸಿ ತಿಳಿಸಿದ್ದಾರೆ.
ಈ ಯುವಕನಲ್ಲಿ ಸೋಂಕು ಪತ್ತೆ ಬಳಿಕ ಜಿಲ್ಲೆಯಲ್ಲಿ ಸೋಂಕು ತಗುಲಿದವರ ಸಂಖ್ಯೆ38ಕ್ಕೆ ಏರಿದ್ದು, ಇವರಲ್ಲಿ ಐವರು ಚೇತರಿಸಿಕೊಂಡಿದ್ದಾರೆ.