ಜಿಲ್ಲೆ

ನಾಳೆಯಿಂದ ಜಿಲ್ಲೆಯೊಳಗೆ ಕೆಎಸ್‌ಆರ್‌ಟಿಸಿ ಸಂಚಾರ ಖಚಿತ

Chitradurga

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ಕರೊನಾ ಆತಂಕದಿಂದಾಗಿಯೇ ಮೇ 17ಕ್ಕೆ ಲಾಕ್‌ಡೌನ್‌ವಿಸ್ತರಣೆಯಾಗಿದ್ದರೂ ಹಸಿರು ವಲಯ ಚಿತ್ರದುರ್ಗ ಜಿಲ್ಲೆಯೊಳಗೆ ಮೇ 4ರಿಂದ ಕೆಎಸ್‌ಆರ್‌ಟಿಸಿ ಬಸ್ಸುಗಳ ಸಂಚಾರ ಆರಂಭವಾಗಲಿದೆ. ಸಿಬ್ಬಂದಿ ಲಭ್ಯತೆ ಹಾಗೂ ಪ್ರಯಾಣಿಕರ ದಟ್ಟಣೆ ಆಧರಿಸಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಹಂತ ಹಂತವಾಗಿ ಸಂಚಾರ ಆರಂಭವಾಗಲಿದೆ.

ಹಸಿರು ಜಿಲ್ಲೆಯಿಂದ-ಹಸಿರು ಜಿಲ್ಲೆಗೆ, ಅಂದರೆ ಚಿತ್ರದುರ್ಗದಿಂದ ಶಿವಮೊಗ್ಗ, ಬಳ್ಳಾರಿಗೆ ಹಾಗೂ ಹಸಿರು ಜಿಲ್ಲೆಯಿಂದ ಕಿತ್ತಳೆ ಜಿಲ್ಲೆಗೆ ಅಂದರೆ ಚಿತ್ರದುರ್ಗ-ದಾವಣಗೆರೆ, ಚಿತ್ರದುರ್ಗ-ತುಮಕೂರು ನಡುವೆ ಬಸ್ಸುಗಳನ್ನು ಓಡಿಸಲು ಚಿತ್ರದುರ್ಗ ವಿಭಾಗೀಯ ಕಚೇರಿ ಚಿಂತನೆ ನಡೆಸಿದೆ. ಆದರೆ, ಈ ವಿಷಯ ಆಯಾ ಜಿಲ್ಲಾಧಿಕಾರಿಗಳ ಒಪ್ಪಿಗೆಯನ್ನು ಅವಲಂಬಿಸಿದೆ.

ಸದ್ಯಕಂತೂ ಬೆಂಗಳೂರು, ಮೈಸೂರು ಮೊದಲಾದ ರೆಡ್‌ರೆನ್ ಜಿಲ್ಲೆಗಳಿಗೆ ಹಾಗೂ ಹೊರ ರಾಜ್ಯಗಳಿಗೆ ಬಸ್ಸುಗಳ ಸಂಚಾರ ಆರಂಭವಾಗುವುದಿಲ್ಲ. ಈಗಾಗಲೇ ರಸ್ತೆ ತೆರಿಗೆಯಿಂದ ಮುಕ್ತವಾಗಲು ತಮ್ಮ ಬಸ್ಸುಗಳನ್ನು ಸಾರಿಗೆ ಇಲಾಖೆಗೆ ಸರಂಡರ್ ಮಾಡಿರುವ ಖಾಸಗಿ ಬಸ್ ಮಾಲೀಕರು, ಸೋಮವಾರದಿಂದ ಬಸ್ಸುಗಳನ್ನು ಓಡಿಸಲು ಹಿಂದೇಟು ಹೊಡೆದಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್ಸುಗಳು ಓಡಿದರೂ ಪರವಾಗಿಲ್ಲ, ಕೆಎಸ್‌ಆರ್‌ಟಿಸಿಗೆ ಪ್ರತಿ ಟಿಕೆಟ್ ಮೇಲೆ ರಸ್ತೆ ತೆರಿಗೆ ಇದ್ದರೆ, ಖಾಸಗಿ ಬಸ್‌ಗಳಲ್ಲಿರುವ ಎಲ್ಲ ಸೀಟುಗಳಿಗೆ ತೆರಿಗೆ ವಿಧಿಸಲಾಗುತ್ತದೆ. ಗ್ರಹಚಾರ ಕೆಟ್ಟು ಸೋಂಕೆಲ್ಲದಾರೂ ಕಾಣಿಸಿದರೆ ಮತ್ತೆ ಲಾಕ್‌ಡೌನ್, ಸೀಲ್‌ಡೌನ್ ಎಂದೆಲ್ಲ ಆಗಿ ಇಡೀ ತಿಂಗಳ ತೆರಿಗೆ ಮೈ ಮೇಲೆ ಬರಲಿದೆ.

ಆದ್ದರಿಂದ ನಾವು ಬಸ್ಸುಗಳನ್ನು ಓಡಿಸುವ ದುಸ್ಸಾಹ ಮಾಡುವುದು ಬೇಡವೆಂಬ ನಿರ್ಧಾರಕ್ಕೆ ಖಾಸಗಿ ಬಸ್ ಮಾಲೀಕರು ಬಂದಿದ್ದಾರೆ. ಇನ್ನು ಖಾಸಗಿ ಬಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರು ಸಹಿತ ಅಂತರ ಜಿಲ್ಲೆ, ಅಂತರ ರಾಜ್ಯಗಳಿಗೆ ಹೋಗುತ್ತವೆ, ಈಗ ಅದಕ್ಕಂತೂ ಅವಕಾಶವಿಲ್ಲ.

ಕೆಎಸ್‌ಆರ್‌ಟಿಸಿ ಚಿತ್ರದುರ್ಗ ವಿಭಾಗೀಯ ನಿಯಂತ್ರಕ ವಿಜಯಕುಮಾರ್ ಹೇಳಿಕೆ: ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿ 293 ಬಸ್ಸುಗಳು ಹಾಗೂ 266 ಮಾರ್ಗಗಳಿವೆ. ಸದ್ಯಕ್ಕೆ ಜಿಲ್ಲೆಯೊಳಗೆ ಹಂತ, ಹಂತವಾಗಿ ಶೇ.50 ವಾಹನಗಳೊಂದಿಗೆ ಸಂಚಾರ ಆರಂಭವಾಗಲಿದೆ. ಶಿವಮೊಗ್ಗ, ಬಳ್ಳಾರಿ ನಡುವೆಯೂ ಸಂಚಾರ ಆರಂಭಿಸುವ ಸಾಧ್ಯತೆ ಇದೆ. ಒಂದು ಬಸ್ಸಿನಲ್ಲಿ ಶೇ.40 ಪ್ರಯಾಣಿಕರಿಗೆ ಅವಕಾಶವಿದೆ. ಆದರೆ, ಅವರಿಗೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯ. ಮಾಸ್ಕ್ ಇಲ್ಲದಿದ್ದರೆ ಪ್ರಯಾಣಕ್ಕೆ ಅವಕಾಶ ಕೊಡುವುದಿಲ್ಲ. ಒಂದು ಟ್ರಿಪ್ಪಿನ ಬಳಿಕ ಸೋಂಕು ನಿವಾರಕದೊಂದಿಗೆ ಬಸ್ಸನ್ನು ಸ್ವಚ್ಛಗೊಳಿಸಲಾಗುವುದು. ನಿಲ್ದಾಣಗಳಲ್ಲೂ ಅಂಗಡಿ ಮುಂಗಟ್ಟು ತೆರೆಯಲಿವೆ.

ಖಾಸಗಿ ಬಸ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಹೇಳಿಕೆ: ಮೇ 17ರ ವರೆಗೆ ಸಂಚಾರ ಆರಂಭಿಸದೇ ಇರಲು ನಿರ್ಧರಿಸಿದ್ದೇವೆ. ಸಂಚಾರ ಆರಂಭಿಸಲು ಸಾರಿಗೆ ಇಲಾಖೆಗೆ ಮಾಡಿರುವ ನಮ್ಮ ವಾಹನಗಳ ಸರಂಡರ್ ಹಿಂಪಡೆದರೆ ದುಡಿಮೆಗಿಂತ ನಷ್ಟವೇ ಇನ್ನು ಅಧಿಕವಾಗುತ್ತದೆ. ಆದ್ದರಿಂದ ಬಸ್ಸುಗಳನ್ನು ಓಡಿಸದಂತೆ ಸಂಘದ ಸದಸ್ಯರಿಗೆ ಮನವಿ ಮಾಡಿದ್ದೇನೆ.

ಚಿತ್ರದುರ್ಗ ಆರ್‌ಟಿಒ ಜಿ.ಎಸ್.ಹೆಗಡೆ ಹೇಳಿಕೆ: ಸದ್ಯಕಂತೂ ಯಾವೊಬ್ಬ ಖಾಸಗಿ ಬಸ್ ಮಾಲೀಕರು ತಮ್ಮ ವಾಹನಗಳ ಸರಂಡರ್‌ನ್ನು ಹಿಂಪಡೆದಿಲ್ಲ. ಒಂದು ವೇಳೆ ಸರಂಡರ್ ಹಿಂಪಡೆದರೆ ಅಂದಿನಿಂದಲೇ ಬಸ್ಸಿನಲ್ಲಿ ಎಲ್ಲ ಸೀಟುಗಳ ಸಂಖ್ಯೆಗೆ ತೆರಿಗೆ ಪಾವತಿಸ ಬೇಕಾಗುತ್ತದೆ.