ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ಪ್ರಧಾನ ಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ ಮಾರ್ಗಸೂಚಿಯನ್ವಯ ಕರ್ನಾಟಕದಲ್ಲಿ ಗಣಿ ಭಾದಿತ ಪ್ರದೇಶಗಳ ಅಭಿವೃದ್ಧಿಗೆ ರಾಜ್ಯಸರ್ಕಾರ ಪರಿಮಿತಿ ನಿಗದಿಪಡಿಸಿದೆ.
ಮುಖ್ಯ ಖನಿಜ ಗಣಿ ಪ್ರದೇಶದಿಂದ 10 ಕಿ.ಮೀ. ಹಾಗೂ ಉಪ ಖನಿಜ ಗಣಿ ಪ್ರದೇಶದಿಂದ 5 ಕಿ.ಮೀ.ಸುತ್ತಲಿನ ವಿಸ್ತೀರ್ಣವನ್ನು ಪ್ರತ್ಯಕ್ಷ ಬಾಧಿತ ಪ್ರದೇಶಗಳು ಹಾಗೂ ಆಯಾ ಜಿಲ್ಲೆಯ ಉಳಿದೆಲ್ಲ ಪ್ರದೇಶಗಳನ್ನು ಪರೋಕ್ಷ ಗಣಿಭಾದಿತವೆಂದು ಪರಿಮಿತಿ ನಿಗದಿ ಪಡಿಸಲಾಗಿದೆ.
ಪ್ರತಕ್ಷ, ಪರೋಕ್ಷ ಗಣಿಭಾದಿತ ಪ್ರದೇಶಗಳ ಅಭಿವೃದ್ಧಿಗೆ ರೂಪಿಸಿದ ಕ್ರಿಯಾ ಯೋಜನೆಗಳನ್ನು ಜಿಲ್ಲಾ ಖನಿಜ ಪ್ರತಿಷ್ಠಾನಗಳ ಅಧ್ಯಕ್ಷರೂ ಆಗಿರುವ ಆಯಾ ಉಸ್ತುವಾರಿ ಸಚಿವರು ಸಭೆ ನಡೆಸಿ ಜಾರಿಗೊಳಿಸಬೇಕಿದೆ.
ಕಬ್ಬಿಣ, ಮ್ಯಾಂಗನೀಸ್, ಲೈಮ್‌ಲೈಟ್ ಇತ್ಯಾದಿ ಮುಖ್ಯಖನಿಜ ಗಣಿಗಾರಿಕೆ ಪ್ರದೇಶಗಳಿಗೆ 10 ಕಿ.ಮೀ., ಕಲ್ಲು ಕ್ವಾರಿಗಳಿಗೆ 5.ಕಿ.ಮೀ.ನೇರ ಗಣಿಗಾರಿಕೆ ಪ್ರದೇಶವೆಂದು ಪರಿಮಿತಿ ನಿಗದಿ ಆಗಿದೆ.
ಬಳ್ಳಾರಿ, ಕಲಬುರುಗಿ, ಚಿತ್ರದುರ್ಗ ಹಾಗೂ ಉಳಿದ 27 ಜಿಲ್ಲೆಗಳು ನೇರ ಹಾಗೂ ಪರೋಕ್ಷ ಗಣಿ ಬಾಧಿತ ಪ್ರದೇಶಗಳೆಂದು ರಾಜ್ಯಸರ್ಕಾರ ಅಧಿಸೂಚನೆ ಹೊರಡಿಸಿದೆ.
ರಾಜ್ಯಸರ್ಕಾರದ ಒಪ್ಪಿಗೆ ಬೇಕು: ಸಂಗ್ರಹದ ರಾಜಧನದಲ್ಲಿ ಶೇ.60ನ್ನು ಕುಡಿವ ನೀರು,ಶಿಕ್ಷಣ,ಆರೋಗ್ಯಕ್ಕೆ ಹಾಗೂ ಶೇ.40ನ್ನು ಮೂಲ ಸೌಕರ್ಯಗಳ ಅಭಿವೃದ್ಧಿಗೆ ಬಳಸಬೇಕಿದೆ. ಖನಿಜ ಪ್ರತಿಷ್ಠಾನ ಅಧ್ಯಕ್ಷರು 5 ಕೋಟಿ ರೂ.,ಜಿಪಂ ಅಧ್ಯಕ್ಷರು 2 ಕೋಟಿ ರೂ. ಮೊತ್ತದ ಕಾಮಗಾರಿ ಕೈಗೊಳ್ಳುವ ವಿವೇಚಾನಾಧಿಕಾರಕ್ಕೆ ರಾಜ್ಯಸರ್ಕಾರದ ಒಪ್ಪಿಗೆ ಸಿಗಬೇಕಿದೆ.
110 ಗ್ರಾಮಗಳು: ಜಿಲ್ಲೆಯ ಪ್ರತ್ಯಕ್ಷ - ಪರೋಕ್ಷ ಗಣಿಭಾದಿತ ಪ್ರದೇಶದ ಅಭಿವೃದ್ಧಿಗೆ 80 ಕೋಟಿ ರೂ.ವೆಚ್ಚದ ಡಿಎಂಎಫ್ ಕ್ರಿಯಾಯೋಜನೆಗೆ ಅಂಗೀಕಾರ ಸಿಗಬೇಕಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅಧ್ಯಕ್ಷತೆಯಲ್ಲಿ ಮಾ.21ರಂದು ಚಿತ್ರದುರ್ಗದಲ್ಲಿ ಸಭೆ ನಡೆಯಲಿದೆ.