ಚಿತ್ರದುರ್ಗ: ಈ ನಾಡಿನ ಕಲಾವಿದರು ಉಳಿದರೆ, ಪರಂಪರೆಯ ಪ್ರತೀಕವಾಗಿರುವ ಜನಪದ ಕಲೆ ಉಳಿಯುತ್ತದೆ ಎಂದು ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಹೇಳಿದರು.
ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ ಕಬೀರಾನಂದಾಶ್ರಮದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದರಿಗೆ ಆಹಾರ ಧಾನ್ಯ ಕಿಟ್ ವಿತರಿಸಿ ಮಾತನಾಡಿ, ವಿಶ್ವವ್ಯಾಪಿ ಹರಡಿರುವ ಕರೊನಾ ಬಡವರ ಬದುಕನ್ನು ದುರ್ಬರಗೊಳಿಸಿದೆ. ಕಲಾವಿದರೂ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಎಚ್.ವಿಶ್ವನಾಥ್ ಮಾತನಾಡಿ, ಇವತ್ತಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಜನಪದ ಕಲೆ ಮತ್ತು ಕಲಾವಿದರನ್ನು ಉಳಿಸಿ, ಬೆಳೆಸುವ ಕೆಲಸವನ್ನು ಪರಿಷತ್ ಮಾಡುತ್ತಿದೆ ಎಂದು ತಿಳಿಸಿದರು.
ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಸಾನ್ನಿಧ್ಯ, ಶ್ರೀ ಶಿವಲಿಂಗಾನಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಪರಿಷತ್ ಜಿಲ್ಲಾಧ್ಯಕ್ಷ ಡಾ.ಜೆ.ಕರಿಯಪ್ಪ ಮಾಳಿಗೆ, ಆರ್.ಮೂರ್ತಿ, ಯುಗಧರ್ಮ ರಾಮಣ್ಣ ಇದ್ದರು.
ಸತೀಶ್‌ಕುಮಾರ್ ಜಟ್ಟಿ ಪ್ರಾರ್ಥಿಸಿದರು. ಪರಿಷತ್ ಜಿಲ್ಲಾ ಕಾರ್ಯದರ್ಶಿ ನಿರಂಜನ ದೇವರಮನೆ ಸ್ವಾಗತಿಸಿದರು. ಸಂಚಾಲಕ ಕೆ.ಸಿ.ರುದ್ರೇಶ್ ವಂದಿಸಿದರು.