ಚಿತ್ರದುರ್ಗ: ದೇಶದ ಅಭಿವೃದ್ಧಿಗಾಗಿ ಎಲ್ಲರಿಗೂ ಸಮಾನ ಶಿಕ್ಷಣ ಸಿಗಬೇಕೆಂದು ಕಬೀರಾನಂದ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಟಿ.ಗಿರೀಶ್ ಹೇಳಿದರು.
ನಗರದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಹತ್ತು ಬೆಳದಿಂಗಳ ಹಾಗೂ ವಿದ್ಯಾರ್ಥಿ ಸಂಘಟನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಕ್ಷಣದಲ್ಲಿ ಸಮಾನತೆ ಕುರಿತು ಉಪನ್ಯಾಸ ನೀಡಿದರು.
ಶಿಕ್ಷಣದಿಂದ ದೇಶ ಅಭಿವೃದ್ಧಿಯಾಗುತ್ತದೆ. ಜಾತಿ, ಧರ್ಮ, ಲಿಂಗಬೇಧ ಭಾವವಿಲ್ಲದೆ ಎಲ್ಲರಿಗೂ ಶಿಕ್ಷಣ ಸಿಗಬೇಕು. ಯುವ ಜನರಲ್ಲಿ ಹೊಸ ಚಿಂತನೆಗಳ ಮೂಲಕ ಸಮಾನತೆ, ದೇಶ ಭಕ್ತಿ ಮನೋಭಾವ ಬೆಳೆಸಬೇಕು. ಧರ್ಮ, ಜಾತಿಗೆ ಸಿಮೀತವಾದ ಆಚರಣೆಗಳನ್ನು ಶಾಲಾ, ಕಾಲೇಜುಗಳಲ್ಲಿ ನಿಯಂತ್ರಿಸಬೇಕು. ಶ್ರೇಷ್ಠ ಸಂವಿಧಾನವನ್ನು ಹೊಂದಿರುವ ಭಾರತದಲ್ಲಿ ಎಲ್ಲರೂ ಸಮಾನರು ಎಂದರು.
ಸಂಸ್ಥೆ ಕಾರ್ಯದರ್ಶಿ ಕೆ.ಎಂ.ವೀರೇಶ್ ಮಾತನಾಡಿ, ಹತ್ತು ಬೆಳದಿಂಗಳು ಒಂದು ವಿಶೇಷ ಕಾರ್ಯಕ್ರಮ. ಇಲ್ಲಿ ಪ್ರತಿ ತಿಂಗಳು ಒಂದು ವಿಶೇಷ ಉಪನ್ಯಾಸ ನಡೆಯುತ್ತದೆ. ಮಾನಸಿಕ ವಿಕಸನ ಹೊಂದಲು ಉಪನ್ಯಾಸಗಳು ಸಹಕಾರಿಯಾಗಿವೆ ಎಂದು ತಿಳಿಸಿದರು.
ವಿಜ್ಞಾನ ಪರಿಷತ್ ಸದಸ್ಯ ಎಚ್.ಎಸ್.ಟಿ.ಸ್ವಾಮಿ, ಬಾಪೂಜಿ ದೂರ ಶಿಕ್ಷಣ ವಿಭಾಗದ ಪ್ರೊ.ಎ.ಎಂ.ರುದ್ರಪ್ಪ, ಸಂಸ್ಥೆ ಶೈಕ್ಷಣಿಕ ಸಂಯೋಜಕ ಶಿವಕುಮಾರ್, ಬಾಪೂಜಿ ಸಮೂಹ ಸಂಸ್ಥೆ ನಿರ್ದೇಶಕ ಕೆ.ಎಂ.ಚೇತನ್, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಆರ್.ಜಯಲಕ್ಷ್ಮಿ, ಉಪನ್ಯಾಸಕ ಮಾರುತೇಶ್, ಮಂಜುನಾಥಪ್ಪ, ಪದ್ಮಶ್ರೀ, ಎ.ಎಂ.ಅರ್ಚನಾ, ನಾಗರಾಜ್ ಬೇದ್ರೆ, ಮಂಜುನಾಥ್ ಮತ್ತಿತರರು ಇದ್ದರು.