ಜಿಲ್ಲೆ

ಕರೊನಾ ವಿರುದ್ಧ ಹೋರಾಟಕ್ಕೆ ಕೋಟೆ ಜನ ಜೈ

Chitradurga

ಚಿತ್ರದುರ್ಗ: ಕರೊನಾ ವಿರುದ್ಧದ ಹೋರಾಟಕ್ಕೆ ಪ್ರಧಾನಿ ಮೋದಿ ಭಾನುವಾರ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಓಬವ್ವನ ನಾಡು ಚಿತ್ರದುರ್ಗದ ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.

ಶನಿವಾರ ರಾತ್ರಿಯೇ ನಗರದಲ್ಲಿ ಸ್ತಬ್ಧತೆಯ ಲಕ್ಷಣ ಗೋಚರಿಸಿತ್ತು. ಭಾನುವಾರ ಮುಂಜಾನೆಯೇ ಇಡೀ ನಗರ ನಿಶ್ಯಬ್ಧವಾಗಿತ್ತು. ವ್ಯಾಪಾರ, ವಹಿವಾಟು ಸಂಪೂರ್ಣ ಸ್ಥಗಿತವಾಗಿತ್ತು.

ಜನರ ಓಡಾಟವಿಲ್ಲದೆ, ವಾಹಗಳ ಸಂಚಾರವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ವಾಕ್‌ಪ್ರಿಯರು ಕೂಡ ಒಂದು ದಿನದ ಮಟ್ಟಿಗೆ ವಿರಾಮ ಘೋಷಿಸಿದಂತಿತ್ತು.

ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು ಆಯಾ ನಿಲ್ದಾಣಗಳಲ್ಲಿ ನಿಲುಗಡೆ ಆಗಿದ್ದವು. ಖಾಸಗಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡ ತರಕಾರಿ, ಹೂವಿನ ಮಾರುಕಟ್ಟೆ, ಸಂತೆ ಹೊಂಡ ಮಾರುಕಟ್ಟೆ, ಲಕ್ಷ್ಮೀಬಜಾರ್ ಸಹಿತ ಪ್ರಮುಖ ವಾಣಿಜ್ಯ ಪ್ರದೇಶಗಳು ಬಂದ್ ಆಗಿದ್ದವು.

ರೈಲು ನಿಲ್ದಾಣದಲ್ಲಿ ರಾತ್ರಿಯಿಂದಲೇ ಪ್ಯಾಸೆಂಜರ್ ರೈಲುಗಳ ಸಂಚಾರ ನಿಂತಿತ್ತು. ದವಸ ತಂದಿದ್ದ ಗೂಡ್ಸ್ ಗಾಡಿಯೊಂದು ಆನ್‌ಲೋಡ್‌ಗೆ ಕಾಯುತ್ತಿತ್ತು. ಇಡೀ ನಿಲ್ದಾಣ ಬಿಕೋ ಎನ್ನುತ್ತಿತ್ತು.

ಸವಿತಾ ಸಮಾಜವೂ ಜನತಾ ಕರ್ಫ್ಯೂ ಬೆಂಬಲಿಸಿದ್ದರಿಂದ ನಗರದಲ್ಲಿ ಎಲ್ಲೂ ಕ್ಷೌರದ ಅಂಗಡಿಗಳು ತೆರೆದಿರಲಿಲ್ಲ.

ನಗದಲ್ಲಿ ಅಲ್ಲೊಬ್ರು-ಇಲ್ಲೊಬ್ರು ವಿರಳವಾಗಿ ಓಡಾಡಿದ್ದು ಬಿಟ್ಟರೆ ಎಲ್ಲಿಯೂ ಜನ ದಟ್ಟಣೆ ಇರಲಿಲ್ಲ. ಎಟಿಎಂ, ಔಷಧ ಅಂಗಡಿಗಳು ತೆರೆದಿದ್ದರೂ ಗ್ರಾಹಕರು ಕಂಡು ಬರಲಿಲ್ಲ. ಮಾರುಕಟ್ಟೆ ಬಂದ್ ಕಾರಣ ಯುಗಾದಿ ಹಬ್ಬದ ಖರೀದಿ ಇರಲಿಲ್ಲ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಪೆಟ್ರೋಲ್ ಬಂಕ್‌ಗಳು, ಹೋಟೆಲುಗಳು ಮುಚ್ಚಿದ್ದವು.

ಮನೆಯಲ್ಲಿ ಕಾಲ ಕಳೆದ ಜನರು: ಬೆಳಗ್ಗೆ ಹಾಲು ಖರೀದಿಸಲು ಹೊರ ಬಂದಿದ್ದ ಜನರು, 8 ಗಂಟೆಯೊಳಗೆ ಮನೆ ಸೇರಿ ಕುಟುಂಬಸದಸ್ಯರ ಜತೆ ಕಾಲ ಹಾಕಿದರು. ಕೆಲವರು ಟಿವಿ ವೀಕ್ಷಿಸುತ್ತ ಕಾಲ ಕಳೆದರೆ ಇನ್ನು ಕೆಲವರು ಕೇರಂ, ಚೆಸ್, ವಿಡಿಯೋ ಗೇಮ್‌ಗಳಲ್ಲಿ ಮಗ್ನರಾಗಿದ್ದರು. ಸರ್ಕಾರಿ ನೌಕರರು, ವರ್ತಕರು, ಉದ್ದಿಮೆದಾರರು, ಕಾರ್ಮಿಕರು ಮನೆಯಲಿದ್ದರು.

ಪ್ರವಾಸಿ ತಾಣಗಳಿಗೂ ಹೋಗುವಂತಿಲ್ಲ: ಬಾರ್ ಆ್ಯಂಡ್ ರೆಸ್ಟೊರೆಂಟ್, ಮದ್ಯದಂಗಡಿಗಳು ಮುಚ್ಚಿದ್ದವು. ದೇವಾಲ ು ಗಳು, ಕೋಟೆ, ಮುರುಘಾ ವನ, ಚಂದ್ರವಳ್ಳಿ, ಜೋಗಿಮಟ್ಟಿ ಸೇರಿ ಪ್ರವಾಸಿ ತಾಣಗಳು ಮುಚ್ಚಿದ್ದವು.

ಕಳೆದ 15-20ದಿನಗಳಿಂದ ವಸತಿಗೃಹಗಳಲ್ಲಿ ಉಳಿಯುವವರ ಸಂಖ್ಯೆ ಕುಸಿದಿದೆ. ಉಳಿದವರಿಗೆ ಆಯಾ ವಸತಿ ಗೃಹಗಳಲ್ಲಿ ಊಟೋಪಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಪೊಲೀಸ್ ಸಿಬ್ಬಂದಿ ಪರಿಸ್ಥಿತಿ ನಿಗಾ ವಹಿಸಿದ್ದರಾದರೂ ಇತರೆ ಬಂದ್ ಸಂದರ್ಭಗಳಲ್ಲಿರುವಂತೆ ಎಲ್ಲೂ ಕಂಡು ಬರಲಿಲ್ಲ.

ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಬರುವವರ ಸಂಖ್ಯೆ ಕುಸಿದಿತ್ತು.ನಿತ್ಯ ಸರಾಸರಿ 2000 ಒಪಿಡಿ ರೋಗಿಗಳಿರುತ್ತಾರೆ. ಮಧ್ಯಾಹ್ನ 2ರ ಹೊತ್ತಿಗೆ 300ರ ದಾಟಿರಲಿಲ್ಲ. ಖಾಸಗಿ ಆಸ್ಪತ್ರೆಗಳಲ್ಲೂ ಒಪಿಡಿ ಸೇವೆ ಬಂದ್ ಇತ್ತು.

ಪೌರಕಾರ್ಮಿಕರು ಸ್ವಚ್ಛತೆಯಲ್ಲಿ ಮಗ್ನ: ಪೌರಕಾರ್ಮಿಕರು ನಗರಸ್ವಚ್ಛತೆ ಕಾರ‌್ಯದಲ್ಲಿ ನಿರತರಾಗಿದ್ದರು. ನಾನಾ ಕಡೆ ಫಾಗಿಂಗ್ ಮಾಡಿದರು ಎಂದು ಆಯುಕ್ತ ಜಿ.ಟಿ. ಹನುಮಂತರಾಜು ತಿಳಿಸಿದರು. ಎರಡು ಇಂದಿರಾ ಕ್ಯಾಂಟಿನ್‌ಗಳು ಮಧ್ಯಾಹ್ನದವರೆಗೆ ತೆರೆದಿದ್ದು ಆನಂತರ ಮುಚ್ಚಿದವು.

ಇಂದಿನಿಂದ ಪಾರ್ಸೆಲ್: ಮಾ.24ರಿಂದ ಹೋಟೆಲ್‌ಗಳಲ್ಲಿ , ಬಾರ್ ಆ್ಯಂಡ್ ರೆಸ್ಟೊರೆಂಟ್‌ಗಳಲ್ಲಿ ವೆಜ್, ನಾನ್‌ವೆಜ್ ಇದ್ದರೂ ಪಾರ್ಸೆಲ್‌ಗೆ ಮಾತ್ರ ಅವಕಾಶವಿರುತ್ತದೆ. ಮಾ.31ರವರೆಗೆ ಮದ್ಯಮಾರುವುದಿಲ್ಲ ಎಂದು ಐಶ್ವರ್ಯ ಫೋರ್ಟ್ ಮಾಲೀಕ ಅರುಣ್‌ಕುಮಾರ್ ತಿಳಿಸಿದರು.

ಮದ್ಯ ಮಾರಾಟ ಬಂದ್: ಮಾ 23-31ರ ವರೆಗೆ ಮದ್ಯದಂಗಡಿ, ವೈನ್‌ಬೊಟಿಕ್, ಎಂಎಸ್‌ಐಎಲ್ ಅಂಗಡಿಗಳು ತೆರೆದಿರುತ್ತಿವೆ ಆದರೆ ಬಾರ್ ಆ್ಯಂಡ್ ರೆಸ್ಟೊರೆಂಟ್‌ಗಳಲ್ಲಿ ಮದ್ಯ ಮಾರುವಂತಿಲ್ಲ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.