ಜಿಲ್ಲೆ

ಹಟ್ಟಿ ಜಾತ್ರೆ, ಸಿದ್ಧತೆ ತ್ವರಿತಕ್ಕೆ ಡಿಸಿ ತಾಕೀತು

Chitradurga

ಚಿತ್ರದುರ್ಗ: ನಾಯಕನಹಟ್ಟಿಯಲ್ಲಿ ಮಾ.5ರಿಂದ 16ರ ವರೆಗೆ ನಡೆಯಲಿರುವ ಶ್ರೀ ಗುರು ತಿಪ್ಪೇಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಅಗತ್ಯ ಕಾಮಗಾರಿಗಳ ತ್ವರಿತ ಪೂರ್ಣಕ್ಕೆ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಡಿಸಿ ಕಚೇರಿಯಲ್ಲಿ ಬುಧವಾರ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, ಮಹೋತ್ಸವಕ್ಕೆಂದು ರಚಿಸಿರುವ ಸಮಿತಿಗಳು ಜಾತ್ರೆ ಯಶಸ್ವಿಗೆ ನಿಗಾ ವಹಿಸಬೇಕು. ಜನದಟ್ಟಣೆ ಪ್ರದೇಶದಲ್ಲಿ ನೀರಿನ ಟ್ಯಾಂಕರ್‌ಗಳ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ಭಕ್ತರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು. ಶುದ್ಧ ಕುಡಿಯುವ ನೀರನ್ನು ಕಾಲಕಾಲಕ್ಕೆ ಪೂರೈಸಬೇಕು ಎಂದು ನಾಯಕನಹಟ್ಟಿ ಪಪಂ ಮುಖ್ಯಾಧಿಕಾರಿ ಡಿ.ಭೂತಪ್ಪರಿಗೆ ಹೇಳಿದರು.

ಬೀದಿ ದೀಪಗಳ ಸಮರ್ಪಕ ವ್ಯವಸ್ಥೆ, ವಾಹನ ನಿಲುಗಡೆ, ರಸ್ತೆ ದುರಸ್ತಿ, ಪ್ರಸಾದ ವಿತರಣಾ ಸ್ಥಳದಲ್ಲಿ ಸಿಸಿ ಕ್ಯಾಮರಾ ಹಾಗೂ ಪ್ರಸಾದ ಪರೀಕ್ಷೆ ಕಡ್ಡಾಯ. ಜಾತ್ರೆ ವೇಳೆ ಅಂಗಡಿ ಮುಂಗಟ್ಟುಗಳಿಂದ ಕರ ವಸೂಲಿ ಮಾಡಬೇಕು. ಆಹಾರ ಸುರಕ್ಷತಾ ನಿಯ ಮಗಳ ಪಾಲನೆ ಮಾಡಬೇಕು. ಪ್ಲಾಸ್ಟಿಕ್ ಬಳಕೆ ಬೇಡ. ಹಸಿ ಹಾಗೂ ಒಣ ಕಸದ ಪ್ರತ್ಯೇಕ ಸಂಗ್ರಹಿಸಬೇಕು. ಪ್ರಾಣಿಬಲಿ ನಿಷೇಧಿಸಲಾಗಿದೆ ಎಂದರು.

ವಿದ್ಯುತ್ ಸಂಪರ್ಕ ವಿಷಯದಲ್ಲಿ ಅಕ್ರಮವೆಸಗಿದರೆ ಪ್ರಕರಣ ದಾಖಲಿಸಿ,ದಂಡ ವಿಧಿಸಲಾಗುವುದು ಎಂದು ಬೆಸ್ಕಾಂ ಇಲಾಖೆ ಅಧಿಕಾರಿ ತಿಳಿಸಿದರು. ಸ್ವಚ್ಛತೆಗೆ ಒತ್ತು ಕೊಡುವಂತೆ ಎಸಿ ವಿ.ಪ್ರಸನ್ನ ಸೂಚಿಸಿದರು. ಜಾತ್ರೆ ವೇಳೆ ವಿವಿಧ ಇಲಾಖೆಗಳಿಂದ ವಸ್ತು ಪ್ರದರ್ಶನ ವಿರುತ್ತದೆ ಎಂದು ಅವರು ಹೇಳಿದರು.

ಬಂದೋಬಸ್ತ್‌ಗೆ 1500 ಸಿಬ್ಬಂದಿ: ಬಂದೋಬಸ್ತ್‌ಗೆ 100 ಮಫ್ತಿ ಪೊಲೀಸರ ಸಹಿತ 1500ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ,ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಚಳ್ಳಕೆರೆ ಡಿವೈಎಸ್ಪಿ ರೋಷನ್‌ಜಮೀರ್ ತಿಳಿಸಿದರು.

ಕಳ್ಳತನ ಮತ್ತು ತಪ್ಪಿಸಿಕೊಂಡ ಮಕ್ಕಳ ಬಗ್ಗೆ ತುರ್ತು ಕ್ರಮಕ್ಕೆ ಪ್ರಮುಖ ಸ್ಥಳಗಳಲ್ಲಿ ಕೌಂಟರ್ ವ್ಯವಸ್ಥೆ ಮಾಡಲಾಗಿದೆ. 7 ಚೆಕ್‌ಪೋಸ್ಟ್ ನಿರ್ಮಿಸಲಾಗಿದೆ ಎಂದರು.

ಎಸ್ಪಿ ಜಿ.ರಾಧಿಕಾ,ನಾಯಕನಹಟ್ಟಿ ಗುರು ತಿಪ್ಪೇ ರುದ್ರಸ್ವಾಮಿ ದೇವಸ್ಥಾನದ ಅಧ್ಯಕ್ಷ ರವಿಶಂಕರ್,ಚಳ್ಳಕೆರೆ ತಹಸೀಲ್ದಾರ್ ಮಲ್ಲಿಕಾರ್ಜುನ್ ಮೊದಲಾದ ಅಧಿಕಾರಿಗಳಿದ್ದರು.