ಜಿಲ್ಲೆ

ನಮ್ ಮಾತಿಗೆ ಕಿಮ್ಮತ್ತು ನೀಡುತ್ತಿಲ್ಲ

Chitradurga

ಚಿತ್ರದುರ್ಗ: ಸರ್ಕಾರಿ ಯೋಜನೆಗಳ ಅನುಷ್ಠಾನ ವೇಳೆ ನಮ್ಮ ಮಾತುಗಳಿಗೆ ಯಾವುದೇ ಕಿಮ್ಮತ್ತು ಸಿಗುತ್ತಿಲ್ಲ ಎಂದು ಮಂಗಳವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಹಲವು ಸದಸ್ಯರು ಅಳಲು ತೋಡಿಕೊಂಡರು.

ವಿವಿಧ ಇಲಾಖೆಗಳ ಯೋಜನೆ, ಸವಲತ್ತು, ಅನುದಾನ, ಸಬ್ಸಿಡಿ ಹಾಗೂ ಫಲಾನುಭವಿಗಳ ಆಯ್ಕೆ ವಿಷಯಗಳು ಜಿಪಂ ಸದಸ್ಯರ ಗಮನಕ್ಕೆ ಮಾತ್ರ ತರಲಾಗುತ್ತದೆ. ಆದರೆ, ಈ ವಿಷಯದಲ್ಲಿ ನಮ್ಮನ್ನು ನಿರ್ಲಕ್ಷಿೃಸಲಾಗುತ್ತಿದೆ. ನಾವುಗಳು ಅಧಿಕಾರಿಗಳಿಗೆ ಕಾಣಿಸುವುದಿಲ್ವಾ? ಬಹುತೇಕ ಅಧಿಕಾರಿಗಳು ಮಾಹಿತಿ ಕೊಡುವುದಿಲ್ಲ. ಸೌಜನ್ಯಕ್ಕೂ ಫೋನ್ ಕರೆ ಸ್ವೀಕರಿಸಲ್ಲ ಎಂದು ಹಲವು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯರ ನೋವಿಗೆ ದನಿಗೂಡಿಸಿದ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಸ್ಥಳೀಯ ಜನಪ್ರತಿನಿಧಿಗಳ ಸಲಹೆ ಪಡೆದು ಫಲಾನುಭವಿಗಳಿಗೆ ಸವಲತ್ತು ವಿತರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕೆಲ ಸದಸ್ಯರಿಗೆ ತಿಳಿಯುತ್ತದೆ, ಇನ್ನುಳಿದವರಿಗೆ ವಿಷಯ ಗೊತ್ತಾಗಲ್ಲವೆಂದರೆ ಹೇಗೆ? ತಾರತಮ್ಯ ನೀತಿ ಅನುಸರಿಸದೆ ಎಲ್ಲರನ್ನು ಗೌರವದಿಂದ ಕಾಣಬೇಕು ಎಂದು ಸೂಚಿಸಿದರು.

85 ಅಡುಗೆ ಕೋಣೆ ಶಿಥಿಲ: ತಾಲೂಕಿನ 394 ಅಕ್ಷರ ದಾಸೋಹ ಅಡುಗೆ ಕೋಣೆಗಳ ಪೈಕಿ 85 ಶಿಥಿಲವಾಗಿದ್ದು, ಜೂನ್ ಅಂತ್ಯದೊಳಗೆ ಹೊಸ ಕೋಣೆಗಳನ್ನು ನಿರ್ಮಿಸುವುದಾಗಿ ಅಕ್ಷರ ದಾಸೋಹ ಅಧಿಕಾರಿ ಹುಲಿಕುಂಟೆರಾಯ ಹೇಳಿದರು.

ಕಡಲೆ ಖರೀದಿ ಕೇಂದ್ರ: ಕಡಲೆ ಫಸಲು ಚೆನ್ನಾಗಿದೆ. ಆದರೆ, ಖರೀದಿ ಕೇಂದ್ರ ಆರಂಭಿಸುವ ಕುರಿತಂತೆ ನನಗೆ ಮಾಹಿತಿ ಇಲ್ಲವೆಂದು ಕೃಷಿ ತಾಲೂಕು ಅಧಿಕಾರಿ ಜಿ.ಯು.ಭಾರತಮ್ಮ ಹೇಳಿದರು. ಖರೀದಿ ಕೇಂದ್ರ ಆರಂಭಿಸದೇ ಇರುವುದಕ್ಕೆ ಶಾಸಕರು ಹಾಗೂ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಅಧ್ಯಕ್ಷ ಡಿ.ಎಂ.ಲಿಂಗರಾಜು, ಉಪಾಧ್ಯಕ್ಷೆ ಶಾಂತಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುರೇಶ್ ನಾಯ್ಕ, ತಿಪ್ಪಮ್ಮ, ಇಒ ಕೃಷ್ಣನಾಯ್ಕ ಇದ್ದರು.

ನಗರದ ಎಪಿಎಂಸಿ ಆವರಣದಲ್ಲಿ ಸ್ವಚ್ಛತೆಗೆ ಆದ್ಯತೆ ಕೊಡಬೇಕೆಂದು ಸದಸ್ಯ ವೇಣುಗೋಪಾಲ್ ಒತ್ತಾಯಿಸಿದರು.