ಹೊಸದುರ್ಗ: ಉದ್ಯೋಗದ ಆಸಕ್ತಿಯಿರುವ ವಲಸೆ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಕೂಡಲೇ ಜಾಬ್ ಕಾರ್ಡ್ ನೀಡುವಂತೆ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಯೋಗೇಶ್ ತಿಳಿಸಿದರು.
ತಾಲೂಕಿನ ದೊಡ್ಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಹಳ್ಳದಲ್ಲಿ ನಡೆಯುತ್ತಿರುವ ನರೇಗಾ ಕಾಮಗಾರಿಯನ್ನು ಗುರುವಾರ ಪರಿಶೀಲಿಸಿ ಮಾತನಾಡಿದರು.
ಸ್ಪಷ್ಟ ಗುರಿ, ಇಚ್ಛಾಶಕ್ತಿಯಿರುವ ಜನಪ್ರತಿನಿಧಿಗಳಿಂದ ಮಾತ್ರ ಜನಪರ ಕಾರ್ಯಕ್ರಮಗಳು ಅನುಷ್ಟಾನ ಸಾಧ್ಯ. ಮುಚ್ಚಿಹೊಗಿದ್ದ ಹಿರೇಹಳ್ಳವನ್ನು ಶಾಸಕ ಗೂಳಿಹಟ್ಟಿ ಶೇಖರ್ ಅವರ ಇಚ್ಛಾಶಕ್ತಿ ಫಲವಾಗಿ ಮತ್ತೆ ನಿರ್ಮಿಸಲಾಗುತ್ತಿದೆ ಎಂದರು.
ಹಳ್ಳವನ್ನು ತೆಗೆಯಲು ಯಂತ್ರಗಳನ್ನು ಬಳಸಲಾಗಿದೆ. ಮುಂದಿನ ಕೆಲಸವನ್ನು ನರೇಗಾ ಅಡಿ ನಡೆಸುವ ಮೂಲಕ ಜಾನಕಲ್ಲು, ದೊಡ್ಡಘಟ್ಟ, ದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಉದ್ಯೋಗ ನೀಡಲಾಗುವುದು ಎಂದು ತಿಳಿಸಿದರು.
ನರೇಗಾದಿಂದ ಕಾರ್ಮಿಕರ ವಲಸೆ ತಡೆಯುವ ಜತೆಗೆ ಗ್ರಾಮೀಣಾಭಿವೃದ್ಧಿ ಕನಸು ಸಾಕಾರಗೊಳ್ಳುತ್ತದೆ. ಬದು ನಿರ್ಮಾಣದಂತಹ ಹೆಚ್ಚಿನ ಮಾನವ ದಿನಗಳನ್ನು ಸೃಷ್ಟಿಸುವಂತ ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಜಿಲ್ಲೆಯ 1080 ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ 189 ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಅವುಗಳ ದುರಸ್ತಿಗೆ 167 ಲಕ್ಷ ರೂ. ಅನುದಾನದ ಅಗತ್ಯವಿದೆ. ಅವುಗಳ ನಿರ್ವಹಣೆ ಮಾಡುತ್ತಿರುವ ಏಜೆನ್ಸಿಗಳ ಸಭೆ ನಡೆಸಿ ಕಳಪೆ ಮಾಡಿರುವವರನ್ನು ಕಪ್ಪುಪಟ್ಟಿಗೆ ಸೇರಿಸುವ ಎಚ್ಚರಿಕೆ ನೀಡಲಾಗಿದೆ. ಶೀಘ್ರದಲ್ಲಿ ಅವುಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಶಾಸಕ ಗೂಳಿಹಟ್ಟಿ ಡಿ.ಶೇಖರ್ ಮಾತನಾಡಿ, ನರೇಗಾ ಯೋಜನೆಯಡಿ ಪ್ರತಿ ಹೋಬಳಿಯಲ್ಲೂ ಪ್ರಮುಖವಾದ ಹಳ್ಳಗಳನ್ನು ಅಭಿವೃದ್ಧಿಪಡಿಸಲು ಚಿಂತಿಸಲಾಗಿದೆ. ಗ್ರಾಮ ಪಂಚಾಯಿತಿಗಳಿಗೆ ನಿಗದಿಪಡಿಸಿರುವ ಮಾನವ ದಿನಗಳಲ್ಲಿ ಶೇ.25ರಷ್ಟನ್ನು ಈ ಕಾರ್ಯಕ್ಕೆ ಮೀಸಲಿಡಬೇಕು. ಜನರಿಗೆ ಉದ್ಯೋಗ ನೀಡಿ ವಲಸೆ ತಡೆಯುವುದು, ಮಳೆ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಮುಖ್ಯ ಉದ್ದೇಶವಾಗಿದೆ ಎಂದರು.
ಪ್ರವಾಹ ತಡೆಗಾಗಿ ಹಿರೇಹಳ್ಳ ಅಭಿವೃದ್ಧಿ: ಪ್ರವಾಹ ತಡೆಯುವ ಉದ್ದೇಶದಿಂದ 16 ಕಿ.ಮೀ. ವ್ಯಾಪ್ತಿಯ ಹಿರೇಹಳ್ಳವನ್ನು ಅಭಿವೃದ್ಧಿ ಪಡಿಸಿರುವುದು ರಾಜ್ಯಕ್ಕೆ ಮಾದರಿಯಾದ ಕಾಮಗಾರಿಯಾಗಿದೆ ಎಂದು ಜಿಪಂ ಸಿಇಒ ಯೋಗೇಶ್ ತಿಳಿಸಿದರು. ಹಳ್ಳದ ಎರಡು ಬದಿ ಗಿಡಗಳನ್ನು ನೆಟ್ಟು ಮಣ್ಣಿನ ಸವಕಳಿ ತಡೆಯುವ ಹಾಗೂ ದಡವನ್ನು ಗಟ್ಟಿಗೊಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಟಲ್ ಭೂಜಲ ಯೋಜನೆಯಡಿ ಕೆರೆಗಳಿಗೆ ಪುನಶ್ಚೇತನ ಮಾಡಲಾಗುವುದು ಹೇಳಿದರು.