ಜಿಲ್ಲೆ

ರೈಲ್ವೆ ಪ್ರಯಾಣಿಕರಿಗೆ ಹಣ ಮರುಪಾವತಿ

ಚಿತ್ರದುರ್ಗ: ಮುಂಗಡ ಟಿಕೆಟ್ ಬುಕ್ ಮಾಡಿದ್ದರೂ ಕೋವಿಡ್-19ರ ಲಾಕ್‌ಡೌನ್‌ನಿಂದಾಗಿ ಮಾ.23ರಿಂದ ಪ್ರಯಾಣಿಸಲಾಗದ ರೈಲ್ವೆ ಪ್ರಯಾಣಿಕರಿಗೆ ಪೂರ್ಣ ಪ್ರಮಾಣದಲ್ಲಿ ಟಿಕೆಟ್ ಹಣ ಹಿಂತಿರುಗಿಸಲಾಗುತ್ತಿದೆ.

ಗ್ರಾಹಕರು ತಾವು ಪ್ರಯಾಣಿಸುವ ದಿನಾಂಕದ 120 ದಿನಗಳ ಮೊದಲೇ ಟಿಕೆಟ್ ಕಾಯ್ದಿರಿಸಬಹುದು. ಇಂಥ ಸನ್ನಿವೇಶದಲ್ಲಿ ಏಕಾಏಕಿ ಆದ ಲಾಕ್‌ಡೌನ್ ದಿನಗಳ ಸಮಯ ಮುಂದುವರಿಯುತ್ತದೆ ಎನ್ನುವಂಥ ಕಲ್ಪನೆಯಾದರೂ ಯಾವ ಪ್ರಯಾಣಿಕರಿಗೆ ಇತ್ತು.?

ಈ ಹಿನ್ನೆಲೆಯಲ್ಲಿ ಇಲಾಖೆ ಲಾಕ್‌ಡೌನ್‌ನಿಂದಾಗಿ ತೊಂದರೆ ಅನುಭವಿಸಿರುವ ಪ್ರಯಾಣಿಕರಿಗೆ ಜು.22ರ ವರೆಗೂ ಟಿಕೆಟ್ ಮೊತ್ತದ ಮರು ಪಾವತಿಗೆ ವ್ಯವಸ್ಥೆ ಮಾಡಿಕೊಂಡಿದೆ.

ಲಾಕ್‌ಡೌನ್ ಸಡಿಲಿಕೆ ಬಳಿಕ ರೈಲ್ವೆ ಇಲಾಖೆ ಈಗ ದೇಶದ ಇತರೆಡೆಯಂತೆ, ಕರ್ನಾಟಕದ ಹಲವು ನಿಲ್ದಾಣಗಳಲ್ಲೂ ಮೊದಲ ಹಂತದಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ ಕೌಂಟರ್‌ಗಳನ್ನು ತೆರೆದಿದೆ.

ಈ ಕೌಂಟರ್‌ಗಳಲ್ಲಿ ಲಕ್ಷಾಂತರ ಪ್ರಯಾಣಿಕರು ಕೋಟ್ಯಂತರ ರೂ. ಹಿಂಪಡೆಯುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರಿಗೆ ಅವರ ಬ್ಯಾಂಕ್ ಖಾತೆಗಳಿಗೆ ಸ್ವಯಂ ಚಾಲಿತವಾಗಿ ಮರು ಸಂದಾಯವಾಗುತ್ತಿದೆ.

ರಾಜ್ಯದ ಹುಬ್ಬಳ್ಳಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯಾಪ್ತಿ ಮೈಸೂರು, ಹಾಸನ, ಅರಸೀಕೆರೆ, ದಾವಣಗೆರೆ ಹಾಗೂ ಶಿವಮೊಗ್ಗದ ರೈಲ್ವೆ ನಿಲ್ದಾಣಗಳ ಕೌಂಟರ್‌ಗಳಲ್ಲಿ ಮುಂಗಡ ಕಾಯ್ದಿರಿಸುವಿಕೆ ಟಿಕೆಟ್ ಮೊತ್ತವನ್ನು ಹಿಂದಕ್ಕೆ ಕೊಡಲಾಗುತ್ತಿದೆ. ಇಲ್ಲಿಯ ನಿಲ್ದಾಣಗಳ ಕೌಂಟರ್‌ಗಳಲ್ಲಿ ಮೇ 25ರಿಂದ ಈವರೆಗೆ ಜೂನ್ 10 ಅಂತ್ಯಕ್ಕೆ 45901 ಪ್ರಯಾಣಿಕರು 2.75 ಕೋಟಿ ರೂ. ಹಿಂಪಡೆದಿದ್ದಾರೆ.

ಉಳಿದವರ ಏನು ಮಾಡಬೇಕು: ರಾಜ್ಯದ ಇನ್ನು ಹಲವು ನಿಲ್ದಾಣಗಳಲ್ಲಿ ಕೌಂಟರ್‌ಗಳು ಕಾರ್ಯಾರಂಭ ಮಾಡಿಲ್ಲ. ಅಂಥ ಊರುಗಳ ಪ್ರಯಾಣಿಕರು ತುರ್ತು ಇದ್ದಲ್ಲಿ ಕೌಂಟರ್ ತೆರೆದಿರುವ ಸಮೀಪದ ನಿಲ್ದಾಣಗಳಿಗೆ ತೆರಳಿ ತಮ್ಮ ಟಿಕೆಟ್ ಮೊತ್ತ ಹಿಂಪಡೆಯಲು ರೈಲ್ವೆ ಇಲಾಖೆ ವ್ಯವಸ್ಥೆಯನ್ನು ಕಲ್ಪಿಸಿದೆ.

ಪ್ರಯಾಣಿಕರು ಅನಗತ್ಯ ಆತಂಕ ಪಡಬೇಕಾಗಿಲ್ಲ. ಪ್ರಯಾಣದ ದಿನಾಂಕದಿಂದ 90 ದಿನದವರೆಗೆ ಪೂರ್ಣ ಪ್ರಮಾಣದಲ್ಲಿ ರಿಫಂಡ್ ಪಡೆಯಬಹುದು. ಚಿತ್ರದುರ್ಗ ಪ್ರಯಾಣಿಕರು ದಾವಣಗೆರೆಯಲ್ಲಿ ಹಣ ಪಡೆಯಬಹುದೆಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರು ವಿಭಾಗದ ಮರು ಪಾವತಿ ವಿವರ (ಮೇ 25ರಿಂದ ಜೂ.10ರ ವರೆಗೆ)
ನಿಲ್ದಾಣ ಹೆಸರು-ಪ್ರಯಾಣಿಕರ ಸಂಖ್ಯೆ-ಮರುಪಾವತಿ ಮೊತ್ತ (ಕೋಟಿ ರೂ.)
ಮೈಸೂರು-28213-1.63
ಹಾಸನ-3040-0.22
ಅರಸೀಕೆರೆ-1954-0.10
ದಾವಣಗೆರೆ-8253-0.50
ಶಿವಮೊಗ್ಗ-4441-0.27