ಚಿತ್ರದುರ್ಗ: ಹಸಿರು ವಲಯದಲ್ಲಿದ್ದ ಚಿತ್ರದುರ್ಗ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಆತಂಕದ ವಾತಾವರಣ ನಿರ್ಮಾಣಗೊಳ್ಳುತ್ತಿದೆ.
ಗುಜರಾತ್‌ನಿಂದ ಹಿಂತಿರುಗಿದ್ದ ಚಿತ್ರದುರ್ಗ ತಬ್ಲಿಘಿ ಜಮಾತ್‌ನ 15 ಸದಸ್ಯರಲ್ಲಿ 64 ವರ್ಷದ ಮೂವರು ಪುರುಷರಲ್ಲಿ ಶುಕ್ರವಾರ ಕರೊನಾ ಸೋಂಕು ದೃಢವಾಗಿತ್ತು. ಇದರ ಬೆನ್ನಲ್ಲೇ ಶನಿವಾರವೂ ಮತ್ತೇ ಮೂವರಲ್ಲಿ ಕರೋನಾ ದೃಢಪಟ್ಟಿದ್ದು, ಸೋಂಕು ಪೀಡಿತರ ಸಂಖ್ಯೆ ಈಗ ಆರಕ್ಕೆ ಏರಿರುವುದು ಚಿಂತೆಗೀಡು ಮಾಡಿದೆ.
34, 26 ಹಾಗೂ 17 ವರ್ಷದ ಯುವಕನಲ್ಲಿ (ಪಿ.ನಂ.787, ಪಿ.ನಂ.788 ಹಾಗೂ ಪಿ.ನಂ.789) ಸೋಂಕಿರುವುದು ದೃಢಪಟ್ಟಿದೆ.
ಜಿಲ್ಲಾಡಳಿತದ ವೈಫಲ್ಯ: ಸೋಂಕು ದೃಢವಾಗಿದ್ದ ಮೂವರನ್ನು ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ನೆಗೆಟಿವ್ ಬಂದಿರುವ 12 ಜನರನ್ನು ಕ್ವಾರಂಟೈನ್‌ನಲ್ಲಿ ಮುಂದುವರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ತಿಳಿಸಿದ್ದರು.
ಆದರೆ, ಬೆಳಗ್ಗೆ ವರದಿಯಲ್ಲಿ ಮತ್ತೆ ಮೂವರಲ್ಲಿ ಸೋಂಕು ದೃಢಪಟ್ಟಿರುವುದನ್ನು ಗಮನಿಸಿದರೆ ಡಿಸಿ ತಪ್ಪು ಮಾಹಿತಿ ಕೊಟ್ಟಿದ್ದಾರೆಂಬ ಅಸಮಾಧಾನ ಜಿಲ್ಲೆಯಲ್ಲಿ ವ್ಯಕ್ತವಾಗಿದೆ.
ಶಿವಮೊಗ್ಗ ಪ್ರಯೋಗಾಲಯದಿಂದ ಮತ್ತೆ ಮೂವರ ವರದಿಯನ್ನು ಮತ್ತೊಂದು ಸುತ್ತಿನ ಪರೀಕ್ಷೆಗಾಗಿ ಪುಣೆಗೆ ಕಳಿಸಲಾಗಿದೆ ಎಂಬ ಮಾಹಿತಿಯನ್ನು ಮುಚ್ಚಿಟ್ಟು, ಉಳಿದ 12 ಜನರ ಪರೀಕ್ಷಾ ವರದಿಯೂ ನೆಗೆಟಿವ್ ಬಂದಿದೆ ಎಂದು ಡಿಸಿ ಹೇಳಿದ್ದರು.
ಆದರೆ, ಪುಣೆ ಪ್ರಯೋಗಾಲಯದ ಅಧಿಕಾರಿಗಳು ಮತ್ತೆ ಮೂವರಲ್ಲಿ ಸೋಂಕಿರುವುದನ್ನು ತಡರಾತ್ರಿ ಫೋನ್ ಮೂಲಕ ತಿಳಿಸಿದ್ದಾರೆ. ನಂತರದಲ್ಲಿ ರಾಜ್ಯಮಟ್ಟದಲ್ಲೂ ಅಧಿಕೃತ ಮಾಹಿತಿ ಬಿಡುಗಡೆ ಆಗಿದೆ. ಆದರೆ, ಈ ಸಂಬಂಧ ಜಿಲ್ಲಾಡಳಿತ ಅಥವಾ ಸ್ಥಳೀಯ ಆರೋಗ್ಯಾಧಿಕಾರಿಗಳು ಮಧ್ಯಾಹ್ನ 3ರ ಬಳಿಕ ಸುದ್ದಿಗೋಷ್ಠಿ ನಡೆಸದೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದರು.
ನೆಮ್ಮದಿಗೆ ಕೊಳ್ಳಿ: ಕರೊನಾದಿಂದ ಇಡೀ ಜಗತ್ತೆ ತತ್ತರಿಸುತ್ತಿದ್ದರೂ, ಮಾ.24ರಂದು ಕಾಣಿಸಿ, ಗುಣಮುಖವಾಗಿದ್ದ ಒಂದು ಪ್ರಕರಣವನ್ನು ಹೊರತುಪಡಿಸಿ ಜಿಲ್ಲೆಯ ಜನರು ಈವರೆಗೆ ಅತ್ಯಂತ ನೆಮ್ಮದಿಯಿಂದ ಇದ್ದರು. ಆದರೆ, ಗುಜರಾತ್ ಎಂಬ ಹೈರಿಸ್ಕ್ ಜೋನ್‌ನಿಂದ ಬಂದಿರುವ ಇವರಲ್ಲಿ ಸೋಂಕು ಪತ್ತೆ ಆಗಿರುವುದು ಕೋಟೆನಾಡಿನ ನೆಮ್ಮದಿಗೆ ಕೊಳ್ಳಿ ಇಟ್ಟಿದೆ.
ಮೇ 5ರಂದು ಬಂದು ಕ್ವಾರಂಟೈನ್‌ನಲ್ಲಿದ್ದವರಿಗೆ ಊಟ ತಂದು ಕೊಟ್ಟವರನ್ನು ಪತ್ತೆ ಮಾಡಿ ಅವರನ್ನೀಗ ಪರೀಕ್ಷೆಗೆ ಒಳಪಡಿಸ ಬೇಕಿದೆ. ಊಟ ತಂದು ಕೊಡುತ್ತಿದ್ದವರ ಪೈಕಿ ಯಾರೊಬ್ಬರು ಪ್ರೈಮರಿ ಕಾಂಟ್ಯಾಕ್ಟ್‌ಗೆ ಬಂದಿಲ್ಲವೆಂದು ತಿಳಿಸಿರುವ ಆರೋಗ್ಯ ಇಲಾಖೆ ಅಧಿಕಾರಿಗಳ ಮಾತಿನ ಮೇಲೆ ಜನರಿಗೆ ನಂಬಿಕೆ ಇಲ್ಲವಾಗಿದೆ. ಊಟ ತಂದು ಕೊಡುತ್ತಿದ್ದವರ ಪೈಕಿ ಇಬ್ಬರನ್ನು ಕ್ವಾರಂಟೈನ್ ಮಾಡಲಾಗಿದೆಂದೂ ಹೇಳಲಾಗುತ್ತಿದೆ.
ಮನೆಯಲ್ಲೇ ಉಳಿದ ಇಬ್ಬರು ಸಿಪಿಐ: ಈಗಾಗಲೇ ಪರೀಕ್ಷೆಗೆ ಒಳಪಟ್ಟಿರುವ ಅಧಿಕಾರಿಗಳ ಪೈಕಿ, ಇಬ್ಬರು ಸಿಪಿಐಗಳು ಸ್ವಯಂ ಪ್ರೇರಿತವಾಗಿ ಮನೆಯಲ್ಲಿದ್ದಾರೆ. ಪರೀಕ್ಷಾ ವರದಿ ಬಳಿಕ ಇವರನ್ನು ಹೋಂ ಕ್ವಾರಂಟೈನ್‌ನಲ್ಲಿ ಮುಂದುವರಿಸುವ ಕುರಿತು ನಿರ್ಧಾರವಾಗಲಿದೆ. ಇವರೊಂದಿಗೆ ಇನ್ನು ಕೆಲ ಅಧಿಕಾರಿಗಳು ಮನೆಯಲ್ಲಿ ಉಳಿದಿದ್ದಾರೆ.
ಕೋವಿಡ್ 19 ಆಸ್ಪತ್ರೆ ಸುತ್ತಲ ಪ್ರದೇಶ ಸೀಲ್‌ಡೌನ್
ಜಿಲ್ಲಾಸ್ಪತ್ರೆಗೆ ಆವರಣದಲ್ಲಿರುವ ಕೋವಿಡ್ 19 ಆಸ್ಪತ್ರೆ ರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಸಮೀಪದಲ್ಲೇ ನಡೆಯುತ್ತಿದ್ದ ತರಕಾರಿ ಮಾರಾಟ ಸ್ಥಳವನ್ನು ಬೆಳಗ್ಗೆಯೇ ತೆರವುಗೊಳಿಸಿರುವ ಪೊಲೀಸರು ಈ ಭಾಗದಲ್ಲಿ ನಿಗಾ ಹೆಚ್ಚಿಸಿದ್ದಾರೆ. ಅಲ್ಲಲ್ಲಿ ಬ್ಯಾರಿಕೇಡ್ ಹಾಕಿದ್ದಾರೆ. ಶುಕ್ರವಾರ ಸಂಜೆ ಸೋಂಕಿನ ಸುದ್ದಿ ಹಬ್ಬುತ್ತಿದ್ದಂತೆ ನಗರದಲ್ಲಿ ಆತಂಕ ಹೆಚ್ಚಿಸಿತು. ಹಲವು ಬಡಾವಣೆಗಳಲ್ಲಿ ಹೊರಗಿನವರ ಪ್ರವೇಶ ಕುರಿತಂತೆ ಎಚ್ಚರಿಕೆ ವಹಿಸಲಾಗಿತ್ತು.