ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ಎರಡು ಹಂತದಲ್ಲಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ನೂರಾರು ಸದಸ್ಯರು ಈಗ ನಿಟ್ಟಿಸಿರು ಬಿಡುವಂತಾಗಿದೆ.
ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಸರ್ಕಾರ ಮೀಸಲು ಪ್ರಕಟಿಸುತ್ತಿದ್ದಂತೆ ಗೆದ್ದ ಸದಸ್ಯರಲ್ಲಿ ಗದ್ದುಗೆಯ ಕನಸು ಚಿಗುರೊಡೆದಿದೆ.
ಕಳೆದೊಂದು ವರ್ಷಕ್ಕೂ ಅಧಿಕ ಕಾಲದಿಂದ ಅಧಿಕಾರ ವಂಚಿತರಾಗಿದ್ದ ಸದಸ್ಯರೀಗ ಹುದ್ದೆ ಗಿಟ್ಟಿಸಿಕೊಳ್ಳಲು ಕ್ರಿಯಾಶೀಲರಾಗಿದ್ದಾರೆ.
ಚಿತ್ರದುರ್ಗ ನಗರಸಭೆಯಲ್ಲಿ ಕಮಲ ಬಾವುಟ ಹಾರಿಸಿದ್ದರೂ ಮೀಸಲು ಕಾರಣಕ್ಕೆ ಆಡಳಿತದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿರಲಿಲ್ಲ.
ಈಗ ಅಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಬಿಸಿಎಗೆ ನಿಗದಿ ಆಗಿದ್ದು, ಇದರನ್ವಯ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಇಬ್ಬರು ಅರ್ಹರಿದ್ದಾರೆ.
ಬಿಜೆಪಿ ಆಡಳಿತ ಖಚಿತ: 35 ಸದಸ್ಯ ಬಲದ ಚಿತ್ರದುರ್ಗ ನಗರಸಭೆಯಲ್ಲಿ ಬಿಜೆಪಿ 17, ಕಾಂಗ್ರೆಸ್ 5, ಜೆಡಿಎಸ್ 6 ಹಾಗೂ ಪಕ್ಷೇತರರು 7 ಸದಸ್ಯರಿದ್ದಾರೆ. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಸಂಸದ ಎ.ನಾರಾಯಣಸ್ವಾಮಿ ಅವರಿಂದ ಬಿಜೆಪಿ ಸಂಖ್ಯೆ 19ಕ್ಕೆ ಏರಲಿದೆ. ಇದರೊಂದಿಗೆ ಪಕ್ಷೇತರ ಸದಸ್ಯರ ಪೈಕಿ ಕೆಲವರು ಬಿಜೆಪಿ ಬೆಂಬಲಿಸುವ ಸಾಧ್ಯತೆಗಳಿವೆ.
ಒಂದು ವೇಳೆ ಏನೇ ರಾಜಕೀಯ ಮೇಲಾಟ ನಡೆದರೂ ಪಕ್ಷೇತರರು, ಕಾಂಗ್ರೆಸ್, ಜೆಡಿಎಸ್ ಒಂದಾಗಿ ಆಡಳಿತ ಚುಕ್ಕಾಣಿ ಹಿಡಿಯಲು ಅಸಾಧ್ಯವಾಗಬಹುದೆಂಬ ವಾತಾವರಣ ಸದ್ಯಕ್ಕಂತೂ ಇದೆ. ಪಕ್ಷೇತರರ ಸಹಿತ ಪ್ರತಿಪಕ್ಷಗಳು ಒಗ್ಗಟ್ಟಾದರೂ ಒಂದು ಮತದ ಕೊರತೆ ಬೀಳಲಿದೆ.
ಈ ತಿಂಗಳ ಅಂತ್ಯದೊಳಗೆ ಚುನಾವಣೆ: ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ಈ ಮಾಸಾಂತ್ಯದಲ್ಲಿ ಚುನಾವಣೆ ಪೂರ್ಣಗೊಳ್ಳಲಿದೆ. ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ದಿನದಿಂದ (ಪ್ರಥಮ ಸಭೆ) ಕೌನ್ಸಿಲ್ ಅಧಿಕಾರ ಅವಧಿ ಐದು ವರ್ಷದವರೆಗೆ ಇರುತ್ತದೆ ಎಂದು ನಗರಸಭೆ ಆಯುಕ್ತ ಜಿ.ಟಿ.ಹನುಮಂತರಾಜು ತಿಳಿಸಿದ್ದಾರೆ.
ಶೀಘ್ರ ಚುನಾವಣೆಗೆ ಒತ್ತಾಯ: ಆಡಳಿತಾಧಿಕಾರಿಗಳ ಏಕ ಪಕ್ಷೀಯ ನಿರ್ಧಾರವನ್ನು ಕೊನೆಗೊಳಿಸಲು ಶೀಘ್ರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಚುನಾವಣೆ ನಡೆಸುವಂತೆ ರಾಜ್ಯ ನಿವೃತ್ತ ಪೌರ ನೌಕರರ ಮತ್ತು ಪೌರ ಕಾರ್ಮಿಕ ಸಂಘದ ಅಧ್ಯಕ್ಷ ಎಲ್.ನಾರಾಯಣಚಾರ್ ಒತ್ತಾ ಯಿಸಿದ್ದಾರೆ.
ಮಹಿಳೆ ದರ್ಬಾರಕ್ಕೆ ನಗರಸಭೆ ಸಾಥ್: ಕಳೆದ ಅವಧಿಯಲ್ಲಿ ಒಬ್ಬ ಮಹಿಳೆ ಕೆಲ ತಿಂಗಳ ಅವಧಿಗೆ ಉಪಾಧ್ಯಕ್ಷರಾಗಿದ್ದು ಹೊರತುಪಡಿಸಿದರೆ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳಲ್ಲಿ ಪುರುಷರ ಪ್ರಾಬಲ್ಯವಿತ್ತು. ಈ ಬಾರಿ ಜಿಲ್ಲೆಯ ಆಯಕಟ್ಟಿನ ಸ್ಥಾನಗಳಲ್ಲಿ ಇರುವ ಮಹಿಳಾ ಪ್ರಾಬಲ್ಯಕ್ಕೆ ನಗರಸಭೆ ಅಧ್ಯಕ್ಷರು ಕೈ ಜೋಡಿಸಲಿದ್ದು, ಕೋಟೆ ನಾಡಿನಲ್ಲಿ ಮಹಿಳೆಯರ ದರ್ಬಾರ ಮುಂದುವರಿಯಲಿದೆ.