ಜಿಲ್ಲೆ

ಜನಗಣತಿಗೆ ಚಿತ್ರದುರ್ಗ ಜಿಲ್ಲೇಲಿ ಸಿದ್ಧತೆ

Chitradurga

ಚಿತ್ರದುರ್ಗ: ಜಿಲ್ಲೆಯಲ್ಲಿ 2021ರ ಜನಗಣತಿ ಯಶಸ್ವಿಗೊಳಿಸಲು ಜಿಲ್ಲಾಡಳಿತ ಸಜ್ಜಾಗುತ್ತಿದ್ದು, ಜಿಲ್ಲಾಧಿಕಾರಿ ಪ್ರಧಾನ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಜಿಲ್ಲಾ ಜನಗಣತಿ ಅಧಿಕಾರಿಯಾಗಿ ನೇಮಕವಾಗಿದ್ದಾರೆ.

ಈ ಬಾರಿ ವಿಶೇಷವಾಗಿ ಮೊಬೈಲ್ ಆ್ಯಪ್ ಮೂಲಕ ಗಣತಿ ನಡೆಯಲಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶಗಳಿಗೆ ಪ್ರತ್ಯೇಕ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ.

ತಹಸೀಲ್ದಾರ್, ನಗರ ಸ್ಥಳೀಯ ಸಂಸ್ಥೆ ಮುಖ್ಯಾಧಿಕಾರಿಗಳು, ಆಯುಕ್ತರು ಮೇಲುಸ್ತುವಾರಿ ವಹಿಸಲಿದ್ದಾರೆ. ಪ್ರತಿ ಬ್ಲಾಕ್‌ಗೆ ಒಬ್ಬ ಗಣತಿದಾರ ಇದ್ದು, ಜಿಲ್ಲೆಯಿಂದ ಇಬ್ಬರು ಮಾಸ್ಟರ್ ತರಬೇತುದಾರರಿಗೆ ರಾಜ್ಯಮಟ್ಟದಲ್ಲಿ ತರಬೇತಿ ಕೊಡಿಸಲಾಗಿದೆ.

ಮೊಳಕಾಲ್ಮೂರು-ಗಣತಿದಾರರು 258, ಮೇಲ್ವಿಚಾರಕರು-42. ಚಳ್ಳಕೆರೆ-673-112. ಚಿತ್ರದುರ್ಗ-790-131. ಹೊಳಲ್ಕೆರೆ-377-62. ಹಿರಿಯೂರು-526-88 ಹಾಗೂ ಹೊಸದುರ್ಗದಲ್ಲಿ 430 ಗಣತಿದಾರರು ಮತ್ತು 72 ಮೇಲ್ವಿಚಾರಕರನ್ನು ನೇಮಿಸಲಾಗಿದೆ. 2011ರ ಜನಗಣತಿ ಗಮನಿಸುವುದಾದರೆ, ಉತ್ತರ ಪ್ರದೇಶದ 19.9 ಕೋಟಿ ಜನಸಂಖ್ಯೆಯೊಂದಿಗೆ ದೇಶದಲ್ಲೇ ಹೆಚ್ಚು ಜನಸಂಖ್ಯೆಯುಳ್ಳ ರಾಜ್ಯವಾಗಿದೆ.

ಭಾರತವು ಜಗತ್ತಿನ ಶೇ.17.50 ಜನಸಂಖ್ಯೆಯನ್ನು ಹೊಂದಿದ್ದು, ಶೇ.74.04 ಸಾಕ್ಷರತೆ ಹಾಗೂ 943 ಲಿಂಗಾನುಪಾತವನ್ನು ಹೊಂದಿದೆ. ಕರ್ನಾಟಕದಲ್ಲಿ 6.1 ಕೋಟಿ ಜನಸಂಖ್ಯೆ ದಾಖಲಾಗಿದ್ದು, ಶೇ.75.04 ಸಾಕ್ಷರತೆ ಹಾಗೂ 965 ಲಿಂಗಾನುಪಾತವಿದೆ.