ಚಿತ್ರದುರ್ಗ: ಜಗತ್ತಿನ ಶ್ರೇಷ್ಠ ದಾರ್ಶನಿಕ, ತತ್ವಜ್ಞಾನಿ, ಸಮಾನತೆಯ ಹರಿಕಾರ ವಿಶ್ವಗುರು ಬಸವೇಶ್ವರರ ಜಯಂತಿ ಆಚರಣೆ ಜಿಲ್ಲಾದ್ಯಂತ ಸರಳವಾಗಿ ಆಚರಣೆ ಮಾಡಲಾಯಿತು.
ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಎಲ್ಲೆಡೆ ಬಸವ ಜಯಂತಿ ಸರಳ ಆಚರಣೆ ಮಾಡಲಾಯಿತು. ಸಾಮೂಹಿಕವಾಗಿ ಜಯಂತಿ ಆಚರಣೆಗೆ ಅವಕಾಶ ಇಲ್ಲದ ಕಾರಣ ಫೇಸ್‌ಬುಕ್ ಲೈವ್‌ನಲ್ಲಿ ಬಸವಣ್ಣನ ಬದುಕು-ಬರಹ, ಓದಿನ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಚಿತ್ರದುರ್ಗ ಮುರುಘಾ ಮಠದ ಶ್ರೀ ಶಿವಮೂರ್ತಿ ಶರಣರು ಫೇಸ್‌ಬುಕ್ ಲೈವ್‌ನಲ್ಲಿ 30 ನಿಮಿಷಗಳ ಕಾಲ ಬಸವೇಶ್ವರರ ಬಗ್ಗೆ ಪ್ರವಚನ ನೀಡಿದರು.
ಬಸವೇಶ್ವರರ ಬದುಕು, ಬರಹ ಅವರು ನಡೆದ ಹಾದಿ ಬಗ್ಗೆ ಮುರುಘಾ ಶರಣರು ಸಹಸ್ತ್ರ ಸಂಖ್ಯೆಯ ನೆಟ್ಟಿಗರಿಗೆ ಬೋಧನೆ ಮಾಡಿದರು. ಬಸವಣ್ಣ ಮಹಾಮಾನವತವಾದಿ, ಸಮಾಜದಲ್ಲಿ ಸಾಕಷ್ಟು ಪರಿವರ್ತೆ ತಂದವರು, ಪ್ರಯೋಗಶೀಲರು, ಹತ್ತಾರು ಸವಾಲು ಎದುರಿಸಿ ಸರ್ವರಿಗೂ ಸಮಪಾಲು, ಸಮಬಾಳು ಅನುಷ್ಠಾನಗೊಳಿಸಿದವರು ಎಂದು ತಿಳಿಸಿದರು.
ಬಸವಣ್ಣ ಅವರದ್ದು ವೈಚಾರಿಕತೆಗೆ ಒತ್ತು ಕೊಡುವಂತಹ ವ್ಯಕ್ತಿತ್ವ. ಅವರಿಗೆ ಸ್ಪಷ್ಟವಾದ ವಿವೇಕ, ವಿವೇಚನೆ ಇತ್ತು. ಮಾನವನ ಬದುಕಿನಲ್ಲಿ ಸಹಜವಾಗಿಯೇ ಅಜ್ಞಾನ ಇರುತ್ತದೆ. ಅಜ್ಞಾನ ಮತ್ತು ಸುಜ್ಞಾನದ ನಡುವೆ ಯಾವಾಗಲು ಮನುಷ್ಯ ಒದ್ದಾಡುತ್ತಿರುತ್ತಾನೆ.
ವಿವೇಕ, ವಿವೇಚನ ನಮ್ಮನ್ನು ಮುನ್ನಡೆಸುತ್ತವೆ. ವಿವೇಕ, ವಿವೇಚನೆ ಇಲ್ಲದ ಮನುಷ್ಯ ಅವಿವೇಕಿ ಆಗುತ್ತಾನೆ, ಅವಿವೇಕದ ನಿರ್ಧಾರ ತೆಗೆದುಕೊಳ್ಳುತ್ತಾನೆ. ಇಂತಹ ಸಂದರ್ಭದಲ್ಲಿ ನಮಗೆ ಸುಜ್ಞಾನ ಮುಖ್ಯ ಎಂದು ಹೇಳಿದರು.
ಚಿತ್ರದುರ್ಗದ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಆವರಣದಲ್ಲಿರುವ ಅನುಭವ ಮಂಟಪದಲ್ಲಿ ವಿಶೇಷ ಅಲಂಕಾರ ಮಾಡುವ ಮೂಲಕ ಜಯಂತಿ ಆಚರಣೆ ಮಾಡಲಾಯಿತು. ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ವಿಶ್ವಗುರು ಬಸವಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ವಚನ ವಾಚನ ಮಾಡಿದರು.
ಜಿಲ್ಲಾ ಪತಂಜಲಿ ಯೋಗ ಪ್ರಚಾರಕ ಪ್ರಕಲ್ಪದಿಂದ ಬಸವೇಶ್ವರರ ಜಯಂತಿ ಆಚರಣೆ ಮಾಡಲಾಯಿತು. ಮಡಿವಾಳ ಮಾಚಿದೇವ ಗುರುಪೀಠದಲ್ಲಿ ಬಸವಣ್ಣನ ಭಾವಚಿತ್ರಕ್ಕೆ ಶ್ರೀ ಬಸವ ಮಡಿವಾಳ ಸ್ವಾಮೀಜಿ ಪುಷ್ಪಾರ್ಚನೆ ಮಾಡುವ ಮೂಲಕ ಜಯಂತಿ ಆಚರಣೆ ಮಾಡಲಾಯಿತು. ಮೇದಾರ ಕೇತೇಶ್ವರ ಮಠದಲ್ಲಿ ಶ್ರೀ ಇಮ್ಮಡಿ ಕೇತೇಶ್ವರ ಸ್ವಾಮೀಜಿ ಸರಳವಾಗಿ ಬಸವ ಜಯಂತಿ ಆಚರಣೆ ಮಾಡಿದರು.