ಜಿಲ್ಲೆ

ಕರೊನಾ ಸೋಂಕು ಗಾಳಿಯಿಂದ ಬರುವುದಿಲ್ಲ

Chitradurga

ಚಿತ್ರದುರ್ಗ: ಕರೊನಾ ಸೋಂಕಿನ ಆತಂಕದ ನಡುವೆಯೂ ಆಶಾ ಕಾರ್ಯಕರ್ತೆಯರ ಸೇವೆ ಅನನ್ಯವೆಂದು ಡಿಎಚ್‌ಒ ಡಾ.ಸಿ.ಎಲ್.ಪಾಲಾಕ್ಷ ಹೇಳಿದರು.

ಜಿಲ್ಲಾ ಕ್ರೀಡಾಂಗಣ ಸಮೀಪದ ನಗರ ಆರೋಗ್ಯ ಕೇಂದ್ರದ ಆವರಣದಲ್ಲಿ ಮಂಗಳವಾರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯಿಂದ ಆಶಾ ಕಾರ್ಯಕರ್ತೆಯರಿಗೆ ಅಗತ್ಯ ವಸ್ತುಗಳ ವಿತರಣೆ ಕಾರ‌್ಯಕ್ರಮದಲ್ಲಿ ಅವರು ಮಾತನಾಡಿದರು.

ಹೊರ ರಾಜ್ಯಮತ್ತು ಜಿಲ್ಲೆಗಳಿಂದ ಜಿಲ್ಲೆಗೆ ಬಂದವರ ಪತ್ತೆಗೆ ಆಶಾ ಕಾರ್ಯಕರ್ತೆಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಜತೆಗೆ ಹಲವು ಸಂಘ, ಸಂಸ್ಥೆಗಳು ಸಹಕರಿಸುತಿದ್ದು ಜಿಲ್ಲೆಯಲ್ಲಿ ಸೋಂಕಿನ ಹತೋಟಿ ಸಾಧ್ಯವಾಗಿದೆ. ಲಾಕ್‌ಡೌನ್ ಸಡಿಲಗೊಂಡಿರುವುದರಿಂದ ಈಗ ಪ್ರತಿಯೊಬ್ಬರು ಹೆಚ್ಚಿನ ಜಾಗೃತಿ ವಹಿಸಬೇಕು. ಕರೊನಾ ಸೋಂಕು ಗಾಳಿಯಿಂದ ಬರುವುದಿಲ್ಲ. ಕೆಮ್ಮುವಾಗ ಮತ್ತು ಸೀನುವಾಗ ಅದು ಹರಡುತ್ತದೆ. ಆದ್ದರಿಂದ ನಾಗರಿಕರು ಸದಾ ಎಚ್ಚರದಿಂದಿದ್ದು, ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡ ಬೇಕೆಂದರು.

ಭಾರತೀಯ ರೆಡ್‌ಕ್ರಾಸ್ ಜಿಲ್ಲಾ ಶಾಖೆ ಅಧ್ಯಕ್ಷ ಮಹೇಂದ್ರನಾಥ್ ಮಾತನಾಡಿ, ಕರ್ತವ್ಯ ನಿರ್ವಹಣೆಯ ವೇಳೆ ಸಮಸ್ಯೆಗಳು ಎದುರಾದರೆ ಸಂಸ್ಥೆ ಗಮನಕ್ಕೆ ತರುವಂತೆ ಆಶಾ ಕಾರ‌್ಯಕರ್ತೆಯರಿಗೆ ಮನವಿ ಮಾಡಿದರು.

ಜಿಲ್ಲಾ ವಾರ್ತಾಧಿಕಾರಿ ಬಿ.ಧನಂಜಯಪ್ಪ, ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಉಪ ಆರೋಗ್ಯ ಶಿಕ್ಷಣಾಧಿಕಾರಿ ಮೂಗಪ್ಪ, ಸಂಸ್ಥೆ ಪ್ರಮುಖರಾದ ಮಜರುಲ್ಲಾ, ಎಸ್.ವೀರೇಶ್, ಅರುಣಕುಮಾರ್, ಪ್ರಕಾಶ್ ಸಾಂಘ್ವಿ, ಸುರೇಶ್ ಬಾಫ್ನಾ, ಅನಂತರೆಡ್ಡಿ, ಮಹಮದ್ ಆಲಿ, ಸುನೀತಾ ಮಲ್ಲಿಕಾರ್ಜುನ್ ಮತ್ತಿತರರು ಇದ್ದರು.