ಚಿತ್ರದುರ್ಗ: ಕರೊನಾ ಕಾರಣಕ್ಕೆ ಒಂದೂವರೆ ತಿಂಗಳಿಂದ ಮದ್ಯದಂಗಡಿಗಳಲ್ಲದೇ ‘ಮಂಕ್’ ಆಗಿದ್ದ ಮದ್ಯ ಪ್ರೀಯರು ಸೋಮವಾರ ಅಂಗಡಿಗಳು ಬಾಗಿಲು ತೆರೆಯುವುದಕ್ಕಿಂತ ಮುನ್ನವೇ ಸಾಲುಗಟ್ಟಿ ನಿಂತಿದ್ದರು.
ಮದ್ಯದಂಗಡಿ ಒಪನ್ ಆಗುತ್ತಿದ್ದಂತೆ ಖುಷಿಯಿಂದ ಮದ್ಯ ಖರೀದಿಸಿದರು. ಬಾಟ್ಲಿ ಕೈ ಸೇರುತ್ತಿದ್ದಂತೆ ಅದಕ್ಕೆ ಮುತ್ತು ಕೊಡುವುದು ಕೆಲವೆಡೆ ಕಂಡು ಬಂತು.
ಉರಿಯುವ ಬಿಸಿಲು ಲೆಕ್ಕಿಸದೇ ಗ್ರಾಹಕರು ಜಿಲ್ಲಾದ್ಯಂತ 90 ಅಂಗಡಿಗಳ ಮುಂದೆ ಸರತಿಯಲ್ಲಿ ಮದ್ಯ ಖರೀದಿಸಿದ ಪರಿಣಾಮ ಒಂದೇ ದಿನದಲ್ಲಿ ಲಕ್ಷಾಂತರ ರೂ. ತೆರಿಗೆ ಸರ್ಕಾರಿ ಬೊಕ್ಕಸವನ್ನು ಸೇರಿದೆ.
ನಗರ ಸಹಿತ ಜಿಲ್ಲಾದ್ಯಂತ 90 ಮದ್ಯಂಗಡಿಗಳಲ್ಲಿ (ಸಿಎಲ್- 2 ಹಾಗೂ ಎಂಎಸ್‌ಐಎಲ್) ವಹಿವಾಟು ನಡೆದಿದ್ದು, ಉಳಿದ ಸನ್ನದುಗಳಲ್ಲಿ ಮದ್ಯ ವಹಿವಾಟಿಗೆ ಅವಕಾಶವಿರಲಿಲ್ಲ.
ಸಿಎಲ್-2 ಪರವಾನಗಿಯ 81 ಹಾಗೂ ಸಿಎಲ್ 11ಸಿ (ಎಂಎಸ್‌ಐಎಲ್) 20 ಮಳಿಗೆಗಳ ಪೈಕಿ ಸ್ಟಾಕ್ ಕಡಿಮೆ ಇರುವಂಥ ಕೆಲವು ಮಳಿಗೆಗಳನ್ನು ತೆರೆಯಲು ಅಬಕಾರಿ ಅಧಿಕಾರಿಗಳು ಕಾನೂನು ಸುವ್ಯವಸ್ಥೆ ಕಾರಣಕ್ಕಾಗಿ ಅವಕಾಶ ನೀಡಿರಲಿಲ್ಲ. ಕೆಎಸ್‌ಬಿಎಲ್ ಡಿಪೋಗಳಿಂದ ಅಂಗಡಿಗಳಿಗೆ ಸರಕು ಮಾರಾಟವಾಯಿತು.
ಅಮಾನತಲ್ಲಿರುವ 10 ಸನ್ನದುಗಳ ಪೈಕಿ ನಾಲ್ಕು ಅಂಗಡಿಗಳಲ್ಲಿ ಮಾರಾಟ ಇರಲಿಲ್ಲ. ಅಂಗಡಿಗಳ ಮುಂದೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಕೆಲವೆಡೆ ಬೆಳಗ್ಗೆ ಜನ ಕಾಣಲಿಲ್ಲ. ಆದರೆ, ಇನ್ನು ಕೆಲವು ಅಂಗಡಿಗಳ ಮುಂದೆ ಚಪ್ಪಲಿ ಹಾಗೂ ಟವೆಲ್ ಇಟ್ಟು ಸರತಿ ಕಾದಿರಿಸಲಾಗಿತ್ತು.
‘ರೌಂಡ್ಸ್’ ಆರಂಭ: ಬೆಳಗ್ಗೆ 9ರ ಮೊದಲು ಕಾಣಸೇ ಇದ್ದ ಜನರು ಅದೇಲ್ಲಿದ್ದರೂ ಏನೊ ನೂರಾರು ಸಂಖ್ಯೆಯಲ್ಲಿ ಪ್ರತಿ ಶಾಫ್ ಮುಂದೆ ಏಕಾಏಕಿ ಕಾಣಿಸಿಕೊಂಡು ಪೊಲೀಸ್ ಸಿಬ್ಬಂದಿ ಹಾಗೂ ಅಂಗಡಿ ಮಾಲೀಕರಿಗೆ ಅಚ್ಚರಿ ಮೂಡಿಸಿದರು. ಅಹಿಕತರ ಘಟನೆಗೆ ಅವಕಾಶವಾಗದಂತೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಒಂದೆಡೆ ಮದ್ಯ ಖರೀದಿಸಿದ ಗ್ರಾಹಕರು ಮಧ್ಯಾಹ್ನಕ್ಕೆ ‘ರೌಂಡ್ಸ್’ ಆರಂಭಿಸಿದ್ದರೇ, ಇನ್ನೊಂದೆಡೆ ವ್ಯವಸ್ಥೆ ಸರಿದೂಗಿಸಲು ಅಬಕಾರಿ ಅಧಿಕಾರಿಗಳು ರೌಂಡ್ಸ್‌ನಲ್ಲಿದ್ದರು. ಸಾಮಾಜಿಕ ಅಂತರವಿಲ್ಲವೆಂದು ಹಾಗೂ ಸ್ಟಾಕ್ ಮುಕ್ತಾಯವಾಯಿತೆಂಬ ಕಾರಣಕ್ಕೆ ಒಂದೆರೆಡು ಅಂಗಡಿಗಳನ್ನು ಮಧ್ಯಾಹ್ನವೇ ಮುಚ್ಚಲಾಯಿತು.
ದರ ಏರಿಕೆ ಹೊರೆ: ಮದ್ಯ ಸಿಕ್ಕ ಖುಷಿಯಲ್ಲಿ ಬಜೆಟ್‌ನಲ್ಲಿ ಆಗಿರುವ ದರ ಏರಿಕೆ ಭಾರ ಗ್ರಾಹಕರಿಗೆ ಗೊತ್ತಾಗಲಿಲ್ಲ. ಬಹುತೇಕ ಎಲ್ಲ ಅಂಗಡಿಗಳ ಮುಂದೆ ಸಂಜೆಯಾದರೂ ಸರತಿ ಕರಗಿರಲಿಲ್ಲ. ಹಲವರು ಬ್ರಾಂಡ್‌ಗಳೆಡೆ ರಾಜೀಯಾಗಿ ಸಿಕ್ಕಿದ್ದೇ ಸೀರುಂಡೆ ಎಂಬಂತೆ ಲಘು ಬಗೆಯಿಂದ ತೆಗೆದು ಕೊಂಡು ಹೋಗುತ್ತಿದ್ದರು.
ನಡೆಯಿತೇ ಅಕ್ರಮ ಮಾರಾಟ?: ಸರತಿಯಲ್ಲಿ ನಿಲ್ಲಲು ಆಗದವರಿಗೆ ಅಕ್ರಮವಾಗಿ ಅಧಿಕ ದರದಲ್ಲಿ ಮಾರಾಟ ಮಾಡಲು ಹಲವೆಡೆ ಅಕ್ರಮವಾಗಿ ಸರಕು ಸಂಗ್ರಹಿಸಿಡಲಾಗುತ್ತಿದೆ ಎಂಬ ದೂರು ಕೇಳಿ ಬಂದಿತು. ಈ ಕುರಿತಂತೆ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಸಾಲಿನಲ್ಲಿ ಇರುವಂಥವರಿಗೆ ಮದ್ಯ ಮಾರಾಟ ಮಾಡಲು ಆಗುತ್ತಿಲ್ಲ. ಇನ್ನೂ ಸ್ಟಾಕ್ ಸಂಗ್ರಹಿಸಿ ಅಕ್ರಮವಾಗಿ ಮಾರಾಟ ಮಾಡಲು ಸಾಧ್ಯವೇ ಇಲ್ಲ ಎಂದು ಅಬಕಾರಿ ಡಿಸಿ ಎನ್.ನಿರ್ಮಲಾ ತಿಳಿಸಿದ್ದಾರೆ.