ಜಿಲ್ಲೆ

ಅಸ್ಪಶ್ಯತೆ ನಿರ್ಮೂಲನೆಗೆ ಜಾಗೃತಿ ಅಗತ್ಯ

ಚಿತ್ರದುರ್ಗ: ಜಿಲ್ಲೆಯಲ್ಲಿ ಅಸ್ಪಶ್ಯತೆ ಸಂಪೂರ್ಣ ನಿರ್ಮೂಲನೆಗಾಗಿ ಕಾನೂನು ಕ್ರಮ ಜತೆ ಸಮುದಾಯದಲ್ಲಿ ಜಾಗೃತಿಯನ್ನೂ ಮೂಡಿಸಬೇಕಿದೆ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಹೇಳಿದರು.

ಡಿಸಿ ಕಚೇರಿಯಲ್ಲಿ ಗುರುವಾರ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಅಸ್ಪಶ್ಯತೆ ಇನ್ನೂ ಅಸ್ತಿತ್ವದಲ್ಲಿದೆ. ಪರಿಶಿಷ್ಟರಿಗೆ ಹೋಟೆಲ್, ಕ್ಷೌರದ ಅಂಗಡಿ, ದೇವಾಲಯಗಳ ಪ್ರವೇಶಕ್ಕೆ ತೊಂದರೆಯಿದೆ. ಕೆಲವೆಡೆ ಆಶಾ ಕಾರ್ಯಕರ್ತೆಯರೂ ಇದರ ನೋವು ಅನುಭವಿಸಿದ್ದಾರೆ ಎಂದು ಸಮಿತಿ ಸದಸ್ಯ ಬಿ.ರಾಜಪ್ಪ ಸಭೆಗೆ ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಪರಿಶಿಷ್ಟರಿಗೆ ಸಾಮಾಜಿಕ ನ್ಯಾಯವೊದಗಿಸಲು ಸರ್ಕಾರ ಹಲವು ಯೋಜನೆ, ಕಾನೂನುಗಳನ್ನು ಜಾರಿಗೊಳಿಸಿದ್ದು, ಅಸ್ಪಶ್ಯತೆ ಸಂಪೂರ್ಣ ನಿರ್ಮೂಲನೆಗಾಗಿ ಕಾನೂನು ಕ್ರಮ ಜತೆಗೆ ಜನರಲ್ಲಿ ಜಾಗೃತಿಯನ್ನೂ ಮೂಡಿಸ ಬೇಕಿದೆ ಎಂದರು.

ಸಮಿತಿ ಸದಸ್ಯ ಅರುಣ್‌ಕುಮಾರ್ ಮಾತನಾಡಿ, ನಾಯಕನಹಟ್ಟಿಯ ಮುಂಡಾಳ ಮತ್ತು ದಾಸರ ಸಮುದಾಯದ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಆಗಿರುವ ನಿವೇಶನ ವಿವಾದಕ್ಕೆ ಸಿಲುಕಿದೆ. ಆದ್ದರಿಂದ ಸರಿಯಾಗಿ ನಿವೇಶನ ಗುರುತಿಸಿ, ಹೊಸ ಹಕ್ಕುಪತ್ರ ವಿತರಿಸಬೇಕು ಎಂದು ತಿಳಿಸಿದರು.

ಸದಸ್ಯ ಭಕ್ತ ಪ್ರಹ್ಲಾದ್ ಮಾತನಾಡಿ, 1994-95 ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿ, ಈಗ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೆರಿಟ್ ಸ್ಕಾಲರ್‌ಶಿಪ್ ಪಡೆಯಲು ತಾಂತ್ರಿಕ ತೊಂದರೆ ಉಂಟಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವೇಳೆ 94-95ನೇ ಸಾಲಿನ ಅಂಕಪಟ್ಟಿ ಅಪ್‌ಲೋಡ್‌ಗೆ ತಾಂತ್ರಿಕ ಸಮಸ್ಯೆ ಇದೆ. ಪರಿಶಿಷ್ಟ ಸಮುದಾಯದವರು ಅಧಿಕವಾಗಿರುವ ಹಾನಗಲ್ ಬಳಿ ಚಿರತೆ ಹಾವಳಿ ಹೆಚ್ಚಿದ್ದು, ಅದರ ಸೆರೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಸದಸ್ಯರು ಪ್ರಸ್ತಾಪಿಸಿದ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಡಿಸಿ ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಮಂಜುಳಮ್ಮ ಮಾತನಾಡಿ, ಕಳೆದ ಜನವರಿಯಿಂದ ಈವರೆಗೆ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ 20 ಪ್ರಕರಣಗಳು ದಾಖಲಾಗಿವೆ. ಕೊಲೆ, ಕೊಲೆ ಯತ್ನ, ಅತ್ಯಾಚಾರ ಹಾಗೂ ಯತ್ನ, ಜಾತಿನಿಂದನೆ 28 ಪ್ರಕರಣಗಳಿಗೆ ಸಂಬಂಧಿಸಿದಂತೆ 17.50 ಲಕ್ಷ ರೂ. ಪರಿಹಾರವನ್ನು ಸಂತ್ರಸ್ಥರಿಗೆ ಬಿಡುಗಡೆ ಮಾಡಲಾಗಿದೆ. 43 ಪ್ರಕರಣಗಳು ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇವೆ ಎಂದರು.

ಎಸ್ಪಿ ಜಿ.ರಾಧಿಕಾ, ಎಸಿ ವಿ.ಪ್ರಸನ್ನ, ಎಎಸ್ಪಿ ಎಂ.ಬಿ.ನಂದಗಾವಿ, ಡಿವೈಎಸ್‌ಪಿಗಳಾದ ಪಾಂಡುರಂಗ, ಶ್ರೀಧರ್ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.