ಚಿತ್ರದುರ್ಗ: ತನ್ನ ಪುತ್ರ ವಿವಾಹ ಸರಳವಗಿ ಆಚರಿಸಿದರೂ ಕೇಸು ಹಾಕಿದರಲ್ಲ ಎಂದು ಮನಸ್ಸಿಗೆ ನೋವಾಗಿದ್ದರೂ ಕಾನೂನನ್ನು ಗೌರವಿಸುತ್ತೇನೆ. ಪ್ರಕರಣ ದಾಖಲಿಸಿದ್ದನ್ನು ಸ್ವಾಗತಿಸುವುದಾಗಿ ಹೊಸದುರ್ಗದ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏ.30ರಂದು ಬೆಲಗೂರಲ್ಲಿ ಜರುಗಿದ ತಮ್ಮ ಪುತ್ರನ ವಿವಾಹ ವೇಳೆ ಲಾಕ್‌ಡೌನ್ ನಿಯಮಗಳ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ರಾಜಕಾರಣದಿಂದ ಪ್ರೇರಿತರಾಗಿ ಪೊಲೀಸರು ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ದೂರಿದರು.
ಆದರೆ, ಚಳ್ಳಕೆರೆ ತಾಲೂಕು ಪರುಶುರಾಮಪುರದಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಪಾಲ್ಗೊಂಡಿದ್ದ ಬ್ಯಾರೇಜ್‌ಗೆ ಬಾಗಿನ ಅರ್ಪಣೆ ವೇಳೆ ನಿಯಮಗಳೆಲ್ಲವನ್ನೂ ಗಾಳಿಗೆ ತೂರಿದ್ದರೂ ಯಾಕೆ ಕ್ರಮ ಜರುಗಿಸಿಲ್ಲವೆಂದು ಜಿಲ್ಲಾಡಳಿತವನ್ನು ಪ್ರಶ್ನಿಸಿದರು.
ಮದುವೆ ಚಪ್ಪರದಲ್ಲಿ 10 ಮಂದಿ ಇದ್ದೇವು. ಅಂದು ಸೇರಿದ್ದ ಜನರ ಸಂಖ್ಯೆ 150 ಮೀರಿರಲಿಲ್ಲ. ಪರಸ್ಪರ ಅಂತರವಿತ್ತು. ಮದುವೆಗೆ ಕರೆಯಲಿಲ್ಲವೆಂದು ಯಾರೂ ಬೇಸರಿಸಿಕೊಳ್ಳ ಬಾರದೆಂಬ ಕಾರಣಕ್ಕೆ ನಾಲ್ಕು ಭಾನುವಾರಗಳಂದು ಹಂತ, ಹಂತವಾಗಿ ಊಟೋಪಚಾರ ಏರ್ಪಡಿಸಿದ್ದೇ. ಆದರೆ, ಪ್ರಕರಣ ದಾಖಲಾದ ಬಳಿಕ ಅದನ್ನೂ ಸ್ಥಗಿತಗೊಳಿಸಿದೆ ಎಂದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಗೋವಿಂದಪ್ಪ ವಿರುದ್ಧ ಹೂಡಿರುವ ಮೊಕದ್ದಮೆ ಹಾಗೂ ಬಾಗಿನ ಅರ್ಪಣೆ ಕಾರ್ಯಕ್ರಮದ ವಿರುದ್ಧ ಕ್ರಮ ಜರುಗಿಸದ ಜಿಲ್ಲಾಡಳಿತದ ನಿಲುವನ್ನು ರಾಜ್ಯಮಟ್ಟದಲ್ಲೂ ಪ್ರಶ್ನಿಸಲಾಗುವುದು. ಈ ಸಂಬಂಧ ಕೆಪಿಸಿಸಿಗೆ ವರದಿ ಸಲ್ಲಿಸುವುದಾಗಿ ಹೇಳಿದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಕೋವಿಡ್ ಸಂಕಷ್ಟದ ಸಮಯದಲ್ಲಿ ಸೇಬಿನ ಹಾರ ಹಾಕುವಂಥ ಅದ್ಧೂರಿತನ ಅಗತ್ಯವಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು, ಸದಸ್ಯರಾದ ಯೋಗೇಶ್‌ಬಾಬು, ಬಿ.ಪಿ.ಪ್ರಕಾಶ್‌ಮೂರ್ತಿ, ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಇದ್ದರು.