ಚಿತ್ರದುರ್ಗ: ನಮ್ಮ ಆರೋಗ್ಯದ ನೂರೆಂಟು ತಾಪತ್ರಯಗಳಿಗೆ ತುರ್ತು ಸನ್ನಿವೇಶದಲ್ಲಿ ತಟ್ಟಂಥ ನೆನಪಾಗುವುದು 108 ವಾಹನ.
ಬಸ್, ರೈಲು, ಖಾಸಗಿ ವಾಹನಗಳ ಸಂಚಾರವಿಲ್ಲದ ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲಿರುವ ಏಕೈಕ ಆಸರೆ 108.
ಆಂಬುಲೆನ್ಸ್ ಸಿಬ್ಬಂದಿ ಬೆಳಗ್ಗೆ 8ರಿಂದ ರಾತ್ರಿ 8 ಹಾಗೂ ರಾತ್ರಿ 8ರಿಂದ ಬೆಳಗ್ಗೆ 8 ರವರೆಗೆ ತಲಾ 12 ತಾಸು 2 ಪಾಳಿಗಳಲ್ಲಿ ಪ್ರಾಣ ಪಣಕ್ಕಿಟ್ಟು ಆರೋಗ್ಯ ಸೇವೆಯಲ್ಲಿ ನಿರತರಾಗಿದ್ದಾರೆ.
ಪ್ರಸ್ತುತ ಸಂದರ್ಭದಲ್ಲಿ 108 ವಾಹನದ ಸಿಬ್ಬಂದಿಗೆ ರಜೆ ಕೊಡದಂತೆ ಸೇವೆಯ ಉಸ್ತುವಾರಿ ಹೊತ್ತ ಆಯಾ ಜಿಲ್ಲಾ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿ ಕೂಡ ಸೂಚಿಸಿದ್ದಾರೆ.
ದಿನಕ್ಕೆ 10 ಸಾವಿರಕ್ಕೂ ಅಧಿಕ ಕರೆಗಳು: ಬೆಂಗಳೂರಲ್ಲಿರುವ 108 ಆಂಬುಲೆನ್ಸ್ ನಿಯಂತ್ರಣ ಕಚೇರಿಗೆ ದಿನಕ್ಕೆ 10 ಸಾವಿರಕ್ಕೂ ಅಧಿಕ ಕರೆಗಳು ಬರುತ್ತಿವೆ. ಬಂದ ಕರೆಗಳನ್ನು ಆಯಾ ಜಿಲ್ಲೆಗಳಿಗೆ ವರ್ಗಾಯಿಸಲಾಗುತ್ತಿದೆ.
ಸವಾಲು ಸ್ವೀಕರಿಸಿದ ಸಿಬ್ಬಂದಿ: ಆರೋಗ್ಯದ ತುರ್ತು ಅರಿತಿರುವ ಸಿಬ್ಬಂದು ಈ ಸನ್ನಿವೇಶವನ್ನು ಸವಾಲಾಗಿ ಸ್ವೀಕರಿಸಿ ಆರೋಗ್ಯ ಸೇವೆ ಒದಗಿಸುತ್ತಿದ್ದಾರೆ. ಕರೊನಾ ಭೀತಿ ಹಿನ್ನೆಲೆಯಲ್ಲಿ ಪ್ರತಿ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ದ ಬಳಿಕ ವಾಹನವನ್ನು ಡಿಸ್‌ಇನ್ಫೆಕ್ಷನ್ ಮಾಡಿದ ಬಳಿಕವೆ ಮತ್ತೊಬ್ಬ ರಿಗೆ ಸರ್ವಿಸ್ ಕೊಡಲಾಗುತ್ತಿದೆ.
ಚಿತ್ರದುರ್ಗದಲ್ಲಿ 24 ವಾಹನಗಳು: ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಸ್ತುತ 24 ವಾಹನಗಳಿವೆ. ಚಳ್ಳಕೆರೆ -5,ಚಿತ್ರದುರ್ಗ-7,ಹಿರಿಯೂರು- 4,ಹೊಳಲ್ಕೆರೆ - 3, ಹೊಸದುರ್ಗ - 2, ಮೊಳಕಾಲ್ಮೂರಲ್ಲಿ 3 ವಾಹನಗಳಿವೆ ಒಟ್ಟು 110 ಸಿಬ್ಬಂದಿ ಕರ್ತವ್ಯದಲ್ಲಿದ್ದಾರೆ.
108 ವಾಹನ ಜಿಲ್ಲಾ ವ್ಯವಸ್ಥಾಪಕ ಎಸ್.ಎನ್.ಬೂದನಗೌಡ ಹೇಳಿಕೆ: ಲಾಕ್‌ಡೌನ್ ಬಳಿಕ ಆಂಬುಲೆನ್ಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. 108 ಕ್ಕೆ ಬರುವ ಕರೆಗಳ ಜತೆಗೆ ಕರೊನಾ ಸಹಾಯವಾಣಿ 104ಕ್ಕೆ ಬರುವ ಕೋರಿಕೆಗಳಿಗೂ ಸ್ಪಂದಿಸಬೇಕಿದೆ. ಜಿಲ್ಲಾಧಿಕಾರಿ ನಿರ್ದೇಶನದಂತೆ ಸಿಬ್ಬಂದಿ ರಜೆ ಹೋಗದೆ ಪಾಳಿ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಸಿಬ್ಬಂದಿಗೆ ಪಿಪಿಇ ಕಿಟ್ ಒದಗಿಸಲಾಗಿದೆ.