ಜಿಲ್ಲೆ

ನಿಯಮಿತ ಆಹಾರ ಸೇವಿಸಿ

ಚಿತ್ರದುರ್ಗ: ನಿಯಮಿತ ಆಹಾರ, ಜೀವನ ಪದ್ಧತಿ ಹಾಗೂ ಯೋಗಾಭ್ಯಾಸ ರೂಢಿಸಿಕೊಂಡರೆ ಉತ್ತಮ ಆರೋಗ್ಯವನ್ನು ಪಡೆಯಬಹುದೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಾಲಾಕ್ಷ ಹೇಳಿದರು.

ಜಿಪಂ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಕೊಳಹಾಳು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಆಶ್ರಯದಲ್ಲಿ ನಗರದ ಐಎಂಎ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಆಯುಷ್ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಯುರ್ವೇದ ಹಾಗೂ ಅಲೋಪತಿ ಒಂದು ನಾಣ್ಯದ 2 ಮುಖಗಳಿದ್ದಂತೆ. ಉತ್ತಮ ಆರೋಗ್ಯಕ್ಕೆ ಈ ಎರಡೂ ಪದ್ಧತಿಗಳ ಅವಶ್ಯವಿದೆ. ಪ್ರಸ್ತುತ ದಿನಮಾನಗಳಲ್ಲಿ ಆಹಾರ ಪದ್ಧತಿ ಬದಲಾಗಿದೆ. ಉತ್ತಮ ಆಹಾರ ಪದ್ಧತಿ ಇಲ್ಲದೆ ಜನರು ಬಹುಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್ ಮಾತನಾಡಿ, ಆಶಾ ಕಾರ್ಯಕರ್ತೆಯರು ಸಾರ್ವಜನಿಕರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ನಿತ್ಯ ಸಂಪರ್ಕ ಹೊಂದಿದ್ದಾರೆ. ಆರೋಗ್ಯ ಇಲಾಖೆ ಪ್ರತಿ ಕಾರ್ಯಕ್ರಮ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುತ್ತಾರೆ ಎಂದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಕೆ.ಎಲ್ ವಿಶ್ವನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಆಯುಷ್ ಚಿಕಿತ್ಸಾ ಪದ್ಧತಿ ಕುರಿತಂತೆ ಈ 27 ಶಿಬಿರಗಳನ್ನು ಆಯೋಜಿಸಲಾಗಿದೆ ಎಂದರು. ಕೊಳಹಾಳ್ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಶೇಖರಯ್ಯ ಜಿ.ಮಠ, ವೈದ್ಯರಾದ ಡಾ.ಆರ್.ಎನ್ ಜೀವಿತೇಶ್, ಡಾ.ನಾರದಮುನಿ, ಡಾ.ಟಿ.ಶಿವಕುಮಾರ್, ಡಾ.ನಂದಿನಿ ಲಾವಣ್ಯ, ಡಾ.ರಾಘವೇಂದ್ರ ಇದ್ದರು.