ಜಿಲ್ಲೆ

ವಿಷ ಸೇವಿಸಿ ನಗರಸಭೆ ನೌಕರ ಆತ್ಮಹತ್ಯೆ

Chitradurga

ಚಿತ್ರದುರ್ಗ: ನನ್ನ ಸಾವಿಗೆ ಮೇಲಧಿಕಾರಿಗಳ ಕಿರುಕುಳ ಕಾರಣವೆಂದು ಆರೋಪಿಸಿ ವಿಡಿಯೋ ಚಿತ್ರೀಕರಿಸಿದ ಚಿತ್ರದುರ್ಗ ನಗರಸಭೆ ದ್ವಿತೀಯ ದರ್ಜೆ ಸಹಾಯಕ ಸೋಮವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಲೆಕ್ಕಪತ್ರ ಶಾಖೆಯ ಶಶಿಕುಮಾರ್ (26) ಮೃತ ನೌಕರ. ಈತ ಹರಿಹರದಿಂದ ಚಿತ್ರದುರ್ಗಕ್ಕೆ ಓಡಾಡುತ್ತಿದ್ದ. ಲಾಕ್‌ಡೌನ್ ಕಾರಣದಿಂದಾಗಿ ಕೆಲಸಕ್ಕೆ ಸರಿಯಾಗಿ ಹಾಜರಾಗಿಲ್ಲ. ಈ ಕಾರಣಕ್ಕೆ ಸಂಬಳ ಕಡಿತ ಮಾಡಿದ್ದಾರೆ ಎನ್ನಲಾಗಿದೆ.

ವಿಡಿಯೋದಲ್ಲಿ ಏನು ಹೇಳಿಕೆ ಇದೆ: ಬೇರೆ ಯಾರೇ ನೌಕರರು ತಪ್ಪು ಮಾಡಿದರೂ ಅವರಿಗೇನೂ ಹೇಳದೆ, ನನಗೆ ಮಾತ್ರ ಸಾರ್ವಜನಿಕವಾಗಿ ನಿಂದಿಸಿ, ಅವಮಾನಿಸುತ್ತಾರೆ. ಸೋಮವಾರವೂ ಹಾಜರಿ ಪುಸ್ತಕದಲ್ಲಿ ಸಹಿ ಹಾಕಿದ್ದರೂ, ಅದನ್ನು ತಿದ್ದಿ ಗೈರೆಂದು ಬರೆದಿದ್ದಾರೆ. ಕೇಳಿದ್ದಕ್ಕೆ ಅಮಾನತು ಪತ್ರ ಸಿದ್ಧಪಡಿಸುತ್ತಿದ್ದು, ನನ್ನ ಸಾವಿಗೆ ಮ್ಯಾನೇಜರ್ ಹಾಗೂ ಆಯುಕ್ತರೇ ಕಾರಣ ಎಂದು ಆರೋಪಿಸಿದ್ದಾರೆ.

ವಿಷ ಸೇವಿಸುವ ಮೊದಲು ತನ್ನ ಅಮ್ಮ ಹಾಗೂ ಇತರ ಬಂಧುಗಳಲ್ಲಿ ಕ್ಷಮೆಯಾಚಿಸಿದ್ದಾನೆ. ನಗರಸಭೆ ನಿರ್ಮಾಣ ಹಂತದ ಸಭಾಂಗಣದಲ್ಲಿ ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದ ಈತ, ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಪ್ರಕರಣ ದಾಖಲಿಸಿ, ಮುಂದಿನ ತನಿಖೆ ನಡೆಸುತ್ತಿರುವುದಾಗಿ ನಗರ ಠಾಣೆ ಪಿಐ ನಯೀಂ ಆಹಮ್ಮದ್ ತಿಳಿಸಿದ್ದಾರೆ.