ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ಪ್ರಸ್ತುತ ಜಿಲ್ಲಾ ಪಂಚಾಯಿತಿಯ 4 ವರ್ಷಗಳ ಅವಧಿಯಲ್ಲಿ ಸಾಮಾನ್ಯ ಸಭೆಗಳ ಸಂಖ್ಯೆ ಸಿಂಗಲ್ ಡಿಜಿಟಲ್ ದಾಟದೆ, ಜಿಲ್ಲೆಯಲ್ಲಿ ವಿಕೇಂದ್ರೀಕರಣ ವ್ಯವಸ್ಥೆಯೇ ಅಣಕಕ್ಕೆ ಒಳಗಾಗಿದೆ.
ಕನಿಷ್ಠ 2 ತಿಂಗಳಿಗೆ ಒಂದು ಸಾಮಾನ್ಯ ಸಭೆ ನಡೆಯಬೇಕೆಂಬುದು ನಿಯಮ. ಅಧಿಕಾರದ ಮೇಲಾಟ, ಚುನಾವಣೆಗಳ ನೀತಿ ಸಂಹಿತೆ ಮತ್ತಿತರ ಕಾರಣಗಳಿಂದ 2016 ರ ಜೂನ್ 23 ರಂದು ಮೊದಲ ವಿಶೇಷ ಹಾಗೂ ಸೆ.14 ರಂದು ಮೊದಲ ಸಾಮಾನ್ಯ ಸಭೆ ನಡೆದವು. ನಂತರ ಸಾಮಾನ್ಯ ಸಭೆಗಳಿಗೂ ಜಿ.ಪಂ.ಗೂ ಅದೇಕೋ ಅಲರ್ಜಿ ಎನಿಸಿದೆ. ಈವರೆಗೆ ಕನಿಷ್ಠ 20 ರ ಸಾಮಾನ್ಯ ಸಭೆಗಳು ನಡೆಯಬೇಕಿತ್ತಾದರೂ ಈ ಸಂಖ್ಯೆ ಏಳನ್ನು ಮೀರಿಲ್ಲ. 2019 ರಲ್ಲಿ ನಡೆದ ಸಭೆಗಳ ಸಂಖ್ಯೆ ಕೇವಲ 2!
ಜನರ ಸಂಕಷ್ಟ ಕುರಿತು ಚರ್ಚಿಸಲು ಸಾಮಾನ್ಯ ಸಭೆಗಳು ಉತ್ತಮ ವೇದಿಕೆ. ಅವುಗಳ ಕಡೆಗಣನೆ ನೋಡಿದರೆ, ಮಾತೆತ್ತಿದ್ದರೆ ಬರದ ಜಿಲ್ಲೆ ಎನ್ನುವ ಪ್ರತಿನಿಧಿಗಳ ಉತ್ತರದಾಯಿತ್ವದ ಬಗ್ಗೆ ಶಂಕೆ ಮೂಡುತ್ತದೆ. ಬಹುಮತದಿಂದ ಅಧಿಕಾರ ಹಿಡಿದಿರುವ ಕಾಂಗ್ರೆಸ್, ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಸುಖಾಸುಮ್ಮನೆ ಕಾಲಹರಣ ಮಾಡಿದ್ದು ಇತಿಹಾಸ. ಜಿಪಂ ಹಿಂದಿನ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಬದಲಾವಣೆ ಬಳಿಕ ಅಧ್ಯಕ್ಷರಾದ ಜಿ.ಎ.ವಿಶಾಲಾಕ್ಷಿ ನಟರಾಜ್ ಅವಧಿಯಲ್ಲೂ ಸಭೆಗಳಿಗೆ ಮಹತ್ವದ ಸ್ಥಾನ ಸಿಕ್ಕಿಲ್ಲ.
2016 ಫೆ.13 ರಂದು ಚುನಾವಣೆ ನಡೆದರೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೇ 4 ರ ವರೆಗೆ ಕಾಯಬೇಕಾಯಿತು. ಸೆ.14 ರಂದು ಮೊದಲ, ಡಿ. 7 ರಂದು 2 ನೇ ಸಾಮಾನ್ಯ ಸಭೆ ನಡೆದವು. ಕೋರಂ ಇಲ್ಲದೇ ಮುಂದೂಡಿದ್ದ 2017 ಫೆ.23ರ 3ನೇ ಸಾಮಾನ್ಯ ಸಭೆ, ಜೂ.23 ಹಾಗೂ ಜು.3 ರಂದು 2 ದಿನಗಳ ಕಾಲ ನಡೆದಿತ್ತು.
ಆನಂತರ ಡಿ.14 ರಂದು ಕರೆದಿದ್ದ 4 ನೇ ಸಾಮಾನ್ಯ ಸಭೆಯನ್ನು ಡಿ. 21,28 ಕ್ಕೆ ಮುಂದೂಡಲಾಯಿತು. 2018 ಫೆ.2 ರ ಹಾಗೂ 9 ರ ಸಭೆಗೆ ಕೋರಂ ಕೊರತೆ ಕಾಡಿತು. ಆದರೆ, 9 ರ ಸಭೆಯನ್ನು ವಿಧಾನ ಮಂಡಲ ಅಧಿವೇಶನದ ನೆಪದಲ್ಲಿ ಮಾ.16 ಕ್ಕೆ ಬಳಿಕ ಆರ್‌ಡಿಪಿ ಆರ್ ಸಭೆ ಹಿನ್ನೆಲೆಯಲ್ಲಿ ಮಾ.27ಕ್ಕೆ ಮುಂದೂಡಲಾಗಿತ್ತು.
ನಾಲ್ಕು ವಿಶೇಷ ಸಭೆಗಳು: 2016 ಜೂ.23, 2017 ಜೂ.2, 2018 ಜು.5 ಹಾಗೂ 2019 ಫೆ.28.
ಸಾಮಾನ್ಯ ಸಭೆಗಳು: 2016 ಸೆ.14, ಡಿ.7, 2018 ಜು.13, ಸೆ.18, ಡಿ.27, 2019 ಫೆ.4 ಹಾಗೂ ಆ.29.
ಒಟ್ಟು 37 ಸದಸ್ಯ ಬಲದ ಜಿಪಂದಲ್ಲಿ ಕಾಂಗ್ರೆಸ್ 23, ಬಿಜೆಪಿ 10 ಹಾಗೂ ಜೆಡಿಎಸ್ 2 ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ.