ಚಿತ್ರದುರ್ಗ: ಹಿಂದುಳಿದ ಸಮುದಾಯಗಳಿಗೆ ಎಲ್ಲ ಕ್ಷೇತ್ರದಲ್ಲೂ ಅನ್ಯಾಯವಾಗುತ್ತಿದೆ. ಈ ವರ್ಗಕ್ಕೆ ನ್ಯಾಯ ಕೊಡಿಸಲು ರಾಜ್ಯಾದ್ಯಂತ ಸಂಘಟನೆ ಮಾಡಿ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಹೇಳಿದರು.
ನಗರದ ಕುರುಬರ ಹಾಸ್ಟೆಲ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಹಿಂದುಳಿದ ಜಾತಿಗಳ ಸಭೆ ಉದ್ಘಾಟಿಸಿ ಮಾತನಾಡಿ, ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ತೀರ್ಪು ಶೋಷಿತರಲ್ಲಿ ಆತಂಕ ಉಂಟು ಮಾಡಿದೆ. ತೀರ್ಪು ಮುಂದಿಟ್ಟುಕೊಂಡು ಮೀಸಲಾತಿ ಕಿತ್ತುಕೊಳ್ಳುವ ಸಂದರ್ಭ ಎದುರಾಗುವ ಸಂಭವ ಇದೆ. ಈಗಲೇ ನಾವೆಲ್ಲರೂ ಎಚ್ಚೇತ್ತುಕೊಳ್ಳಬೇಕು ಎಂದರು.
ಹಿಂದುಳಿದ ಜಾತಿಗಳು ಹೋರಾಟ ಅಥವಾ ಸರ್ಕಾರದ ಮೇಲೆ ಒತ್ತಡ ತಂದು ಯಾವುದೇ ಸೌಲಭ್ಯ ಪಡೆದುಕೊಂಡಿಲ್ಲ. ಆದರೆ, ಸಾಮಾಜಿಕ ನ್ಯಾಯದಡಿ ಮೀಸಲಾತಿ, ವಿದ್ಯಾರ್ಥಿ ವೇತನ ಸೇರಿ ಮತ್ತಿತರ ಸವಲತ್ತು ನೀಡಲಾಗುತ್ತಿದೆ. ಆದರೆ, ಪ್ರಸ್ತುತ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ವೇತನ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಬೆಂಗಳೂರಿನಲ್ಲಿ ಎಲ್ಲ ಹಿಂದುಳಿದ ಜಾತಿಗಳಿಗೆ ತಲಾ 1-2 ಎಕರೆ ಭೂಮಿ ಮಂಜೂರು ಮಾಡಿದ್ದರು. ಈಗ ಅದನ್ನೂ ಕಿತ್ತುಕೊಳ್ಳಲಾಗಿದೆ. ಇದರ ವಿರುದ್ಧವೂ ಹೋರಾಟ ನಡೆಸಬೇಕು ಎಂದು ಹೇಳಿದರು.
ಅಹಿಂದ ಬಳಗದ ಅಧ್ಯಕ್ಷ ಮುರುಘ ರಾಜೇಂದ್ರ ಒಡೆಯರ್ ಮಾತನಾಡಿ, ಬಹುತೇಕ ಹಿಂದುಳಿದ ಸಮುದಾಯದ ನಾಯಕರು ಶೋಷಿತ ವರ್ಗದ ಪ್ರಗತಿಗೆ ಶ್ರಮಿಸುತ್ತಿಲ್ಲ. ಈ ಕಾರಣಕ್ಕೆ ದಿನದಿಂದ ದಿನಕ್ಕೆ ಸೌಲಭ್ಯಗಳಿಗೆ ಸರ್ಕಾರ ಕಡಿವಾಣ ಹಾಕುತ್ತಿದೆ ಎಂದು ದೂರಿದರು.
ಒಕ್ಕೂಟದ ಖಜಾಂಚಿ ವಿ.ಜೆ.ಬದ್ರಿನಾಥ್ ಮಾತನಾಡಿ. ಹಿಂದುಳಿದ ಜಾತಿಗಳ ಒಕ್ಕೂಟ ಬೆಂಗಳೂರಿಗೆ ಮಾತ್ರ ಸೀಮಿತ ಆಗಿರಬಾರದು ಎಂಬ ಕಾರಣಕ್ಕೆ ಈಗ ಎಲ್ಲ ಜಿಲ್ಲೆಗಳಲ್ಲೂ ಶಾಖೆ ಆರಂಭಿಸಲಾಗುತ್ತಿದೆ. ಮೀಸಲಾತಿ ಉಳಿವು, ಸೌಲಭ್ಯ ಪಡೆಯಲು ಹೋರಾಟವೊಂದೆ ದಾರಿ. ಈ ಅರಿವು ಅಹಿಂದ ವರ್ಗದಲ್ಲಿರಬೇಕು ಎಂದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ಆರ್.ವೆಂಕಟರಾಮಯ್ಯ, ಕಾರ್ಯದರ್ಶಿ ರಾಮಕೃಷ್ಣಪ್ಪ, ರಾಜ್ಯ ನಿರ್ದೇಶಕರಾದ ಎ.ಉಮೇಶ್, ಗೋಡೆ ತಿಪ್ಪೇಸ್ವಾಮಿ, ಜಿಲ್ಲಾ ಯಾದವ ಸಂಘದ ಪ್ರಧಾನ ಕಾರ್ಯದರ್ಶಿ ಆನಂದ್, ಉಪ್ಪಾರ ಸಂಘದ ಜಿಲ್ಲಾಧ್ಯಕ್ಷ ಆರ್.ಮೂರ್ತಿ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಎನ್.ಚಂದ್ರಶೇಖರ್, ಮುಖಂಡರಾದ ಶಿವಣ್ಣಾಚಾರ್, ಡಾ.ಲೇಪಾಕ್ಷ, ಎಚ್.ಮಂಜಪ್ಪ, ಎನ್.ಡಿ.ಕುಮಾರ್, ಗೋವಿಂದಪ್ಪ, ಓ.ಪ್ರತಾಪ್ ಜೋಗಿ, ರಾಮಕೃಷ್ಣಪ್ಪ, ಲಕ್ಷ್ಮೀಕಾಂತ್ ಲಿಂಗಾವರಹಟ್ಟಿ, ಸೀತಾರಾಮ್, ಸಿ.ಶಿವುಯಾದವ್, ಬಿ.ಟಿ.ಜಗದೀಶ್, ಕುಮಾರಗೌಡ ಇತರರು ಉಪಸ್ಥಿತರಿದ್ದರು.