ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ ಜಿಲ್ಲೆಯಲ್ಲಿ 87 ಪರೀಕ್ಷಾ ಕೇಂದ್ರ ತೆರೆಯಲಾಗಿದ್ದು, 22986 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಡಿಡಿಪಿಐ ಕೆ.ರವಿಶಂಕರ ರೆಡ್ಡಿ ತಿಳಿಸಿದ್ದಾರೆ.
ಇವರಲ್ಲಿ ಜಿಲ್ಲೆಯ 22615 ಹಾಗೂ 371 ವಲಸೆ ವಿದ್ಯಾರ್ಥಿಗಳಿದ್ದಾರೆ. ಇನ್ನು ಜಿಲ್ಲೆಯಲ್ಲಿ ವ್ಯಾಸಂಗ ಮಾಡಿ ಬೇರೆಡೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ 248 ಇದೆ. ಪರಸ್ಪರ ಅಂತರ ಕಾಪಾಡಲು ಹೆಚ್ಚುವರಿಯಾಗಿ 12 ಬ್ಲಾಕ್ ಪರೀಕ್ಷಾ ಕೇಂದ್ರಗಳು, ಕಂಟೇನ್ಮೆಂಟ್ ವಲಯಗಳು ಘೋಷಣೆಯಾದಲ್ಲಿ ಪರ್ಯಾಯ ವ್ಯವಸ್ಥೆಗಾಗಿ ಪ್ರತಿ ತಾಲೂಕಿನಲ್ಲಿ ತಲಾ ಎರಡು ಪರೀಕ್ಷಾ ಕೇಂದ್ರ ಸಿದ್ಧಪಡಿಸಲಾಗಿದೆ.
ಸಾರಿಗೆ ವ್ಯವಸ್ಥೆ ಇಲ್ಲದ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಯ 197 ವಾಹನಗಳನ್ನು ಬಳಸಿಕೊಳ್ಳುವ ಮೂಲಕ 215 ಮಾರ್ಗಗಳನ್ನು ಗುರುತಿಸಲಾಗಿದೆ. ಪ್ರತಿ ವಿದ್ಯಾರ್ಥಿಗೆ ಎರಡು ಮಾಸ್ಕ್ ವಿತರಿಸಲಾಗುವುದು.
ಕೋವಿಡ್-19 ಲಕ್ಷಣಗಳುಳ್ಳ ವಿದ್ಯಾರ್ಥಿಗಳಿಗೆ ಎನ್-95 ಮಾಸ್ಕ್‌ಗಳನ್ನು ವಿತರಿಸಲು ಪ್ರತಿ ಕೇಂದ್ರಕ್ಕೆ ತಲಾ 10 ಮಾಸ್ಕ್‌ಗಳನ್ನು ಕಾಯ್ದಿರಿಸಲಾಗಿದೆ. ಪ್ರತಿ ಕೇಂದ್ರಕ್ಕೆ 6 ಲೀ.ಸ್ಯಾನಿಟೈಸರ್, ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ 2-03 ಥರ್ಮಲ್ ಸ್ಕ್ಯಾನರ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಆರೋಗ್ಯ ತಪಾಸಣೆ ಹಾಗೂ ಸೂಕ್ತ ಬಂದೋಬಸ್ತ್ ಇರಲಿದೆ. ಅಂತರ್‌ರಾಜ್ಯದಿಂದ 27 ವಿದ್ಯಾರ್ಥಿಗಳು ಗಡಿ ಪ್ರದೇಶದ ಪರೀಕ್ಷಾ ಕೇಂದ್ರಗಳಿಗೆ ಬರಲಿದ್ದಾರೆ ಎಂದು ತಿಳಿಸಿದ್ದಾರೆ.