ಜಿಲ್ಲೆ

ಗಣಮೇಳ ಇತಿಹಾಸ ನಿರ್ಮಿಸಲಿದೆ

Chitradurga

ಚಿತ್ರದುರ್ಗ; ಬೆಂಗಳೂರಲ್ಲಿ ಫೆ.16ರಂದು ನಡೆಯಲಿರುವ ಅಸಂಖ್ಯ ಪ್ರಮಥರ ಗಣಮೇಳ ಅಥವಾ ಸರ್ವ ಶರಣರ ಸಮ್ಮೇಳನ ಇತಿಹಾಸ ನಿರ್ಮಿಸಲಿದೆ ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ಆಶಯ ವ್ಯಕ್ತಪಡಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣ ಹಾಗೂ ಅಲ್ಲಮಪ್ರಭುಗಳ ನೇತೃತ್ವದಲ್ಲಿ ಲಕ್ಷದ ತೊಂಭತ್ತಾರು ಸಾವಿರ ಗಣಂ ಗಳು ಸಮಾವೇಶಗೊಂಡಿದ್ದರು ಎಂಬುದು ಒಂದು ಇತಿಹಾಸ ಎಂದರು.

21ನೇ ಶತಮಾನದಲ್ಲಿ ಅಂತಹದ್ದೇ ಒಂದು ಚಾರಿತ್ರಿಕ ಘಟನೆಗೆ ಈ ಸಮ್ಮೇಳನ ಸಾಕ್ಷಿಯಾಗಲಿದೆ. ಜಾಗತಿಕ ಶಾಂತಿ ಮತ್ತು ಪ್ರಗತಿ ಘೋಷಣೆಯೊಂದಿಗೆ ನಡೆಯುವ ಸಮ್ಮೇಳನ ಜಾತಿ ಆಧಾರಿತ, ರಾಜಕೀಯ ರಹಿತವಾಗಿದೆ. ಇದು ಸಿದ್ಧಾಂತ ಮತ್ತು ತತ್ತ್ವಾಧಾರಿತವಾಗಿದ್ದು, 12ನೇ ಶತಮಾನದಲ್ಲಿ ಅಸಂಖ್ಯ ಪ್ರಮಥರ ಗಣ ಮೇಳ ನಡೆದಿದ್ದರೆ, ಬೆಂಗಳೂರಲ್ಲಿ ಆಗುತ್ತಿರುವುದು ಎರಡನೇಯದ್ದು ಎಂದು ತಿಳಿಸಿದರು.

5 ಕೋಟಿ ರೂ. ವೆಚ್ಚ: ಸಮ್ಮೇಳನ ಯಶಸ್ವಿಗೆ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಅವಿರತ ಶ್ರಮಿಸುತ್ತಿದ್ದಾರೆ. ಅಂದಾಜು 5 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆ ಇದೆ. ಈ ಮೊದಲು ಚಿತ್ರದುರ್ಗ ಅಥವಾ ಉತ್ತರ ಕರ್ನಾಟಕದ ಒಂದು ನಗರದಲ್ಲಿ ಆಯೋಜಿಸುವ ಆಲೋಚನೆ ಇತ್ತು. ಆದರೆ, ಬಸವತತ್ವದೆಡೆ ರಾಷ್ಟ್ರದ ಗಮನ ಸೆಳೆಯುಲು ಬೆಂಗಳೂರಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು.

ಚಿತ್ರದುರ್ಗ ಜಿಲ್ಲೆಯಿಂದ ಕನಿಷ್ಠ 500 ಬಸ್‌ಗಳಲ್ಲಿ ಸಮ್ಮೇಳನಕ್ಕೆ ಜನ ಬರಲಿದ್ದಾರೆ. ರೈತ, ದಲಿತ ಸಹಿತ ಹತ್ತಾರು ಸಂಘಟನೆಗಳು ಸಮ್ಮೇಳನಕ್ಕೆ ಸಹಕಾರ ನೀಡಿವೆ. ಪ್ರತಿ ವರ್ಷ ರಾಜ್ಯದ ಒಂದೊಂದು ಜಿಲ್ಲೆಯಲ್ಲಿ ಗಣಮೇಳ ಆಯೋಜಿಸುವ ಸಲಹೆ ಕೇಳಿ ಬಂದಿದೆ ಎಂದರು.

ಯಾದವ ಸಂಘದ ಜಿಲ್ಲಾಧ್ಯಕ್ಷ ಮೀಸೆ ಮಹಾಲಿಂಗಪ್ಪ, ಫಾದರ್ ರಾಜು, ಪೈಲ್ವಾನ್ ತಿಪ್ಪೇಸ್ವಾಮಿ, ಜಿಪಂ ಮಾಜಿ ಸದಸ್ಯ ಎಲ್.ಬಿ.ರಾಜಶೇಖರ್, ಪಟೇಲ್ ಶಿವಕುಮಾರ್, ಕೆಇಬಿ ಷಣ್ಮುಖಪ್ಪ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ ಮತ್ತಿತರರು ಇದ್ದರು.

ಗಿನ್ನಿಸ್ ದಾಖಲೆಗೆ ಪ್ರಯತ್ನ: ರಾಜ್ಯ, ದೇಶ ಹಾಗೂ ವಿದೇಶಗಳಿಂದ ಲಕ್ಷಾಂತರ ಜನರು ಸಮ್ಮೇಳನಕ್ಕೆ ಆಗಮಿಸುವ ನಿರೀಕ್ಷೆ ಇದೆ. ಸಮಾವೇಶಕ್ಕೆ ಆಗಮಿಸುವವರಿಗೆ ಪ್ರಶ್ನೆಗಳಿರುವ ಫಾರಂ ಕೊಟ್ಟು ಉತ್ತರ ಪಡೆಯುವ ಮೂಲಕ ಸಮ್ಮೇಳನವನ್ನು ದಾಖಲಿಸುವ ಕೆಲಸವಾಗಲಿದೆ. ಗಿನ್ನಿಸ್ ಅಥವ ಲಿಮ್ಕಾ ದಾಖಲೆಗೂ ಪ್ರಯತ್ನ ನಡೆದಿದೆ ಎಂದು ಮುರುಘಾ ಶರಣರು ತಿಳಿಸಿದರು.