ಜಿಲ್ಲೆ

ದುರ್ಗದಲ್ಲಿ ಮೂವರಿಗೆ ಕರೊನಾ ದೃಢ

ಚಿತ್ರದುರ್ಗ: ಜಿಲ್ಲೆಯ ಮೂವರಿಗೆ ಕರೊನಾ ಸೋಂಕಿರುವುದು ಆರೋಗ್ಯ ಇಲಾಖೆ ಶುಕ್ರವಾರದ ವರದಿಯಲ್ಲಿ ದೃಢವಾಗಿದೆ ಎಂದು ಡಿಎಚ್‌ಒ ಡಾ.ಸಿ.ಎಲ್.ಪಾಲಾಕ್ಷ ತಿಳಿಸಿದ್ದಾರೆ.

ಹಿರಿಯೂರು ನಗರದ 48 ವರ್ಷದ ಪುರುಷ, ಹೊಳಲ್ಕೆರೆ ಪಟ್ಟಣದ 25 ವರ್ಷದ ಯುವಕ ಹಾಗೂ ಚಳ್ಳಕೆರೆ ಪಟ್ಟಣದ 24 ವರ್ಷದ ಯುವಕ ಸೇರಿ ಒಟ್ಟು ಮೂವರಿಗೆ ಕೋವಿಡ್ ಸೋಂಕು ತಗುಲಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ50ಕ್ಕೆ ಏರಿಕೆಯಾಗಿದೆ.

ಈ ಪೈಕಿ 43 ಜನರು ಈಗಾಗಲೇ ಚೇತರಿಸಿಕೊಂಡಿದ್ದಾರೆ. ಸೋಂಕಿತ ಮೂವರನ್ನು ಚಿತ್ರದುರ್ಗ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕು ದೃಢಪಟ್ಟವರ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕಿತರ ಮಾಹಿತಿ ಪಡೆಯಲಾಗುತ್ತಿದೆ.

ಶುಕ್ರವಾರ 63 ಜನರ ಗಂಟಲು, ಮೂಗು ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, 29 ಜನರ ವರದಿ ನೆಗೆಟಿವ್ ಬಂದಿದೆ. ಇನ್ನೂ 33 ಜನರ ವರದಿ ಬರಬೇಕಿದೆ. ಜಿಲ್ಲೆಯಲ್ಲಿ 2104 ಜನ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಈವರೆಗೆ 4746 ಜನರ ಮಾದರಿ ಸಂಗ್ರಹಿಸಿದ್ದು, 4531 ಜನರ ವರದಿ ನೆಗೆಟಿವ್ ಬಂದಿದೆ. 134 ಮಾದರಿಗಳು ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲದ ಕಾರಣ ತಿರಸ್ಕೃತ ಗೊಂಡಿವೆ ಎಂದು ಡಿಎಚ್‌ಒ ಹೇಳಿದ್ದಾರೆ.

ಹಿರಿಯೂರು: ನಗರದಲ್ಲಿ ಗುರುವಾರ ಇಬ್ಬರು ವೃದ್ಧರಿಗೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಟಿಬಿ ವೃತ್ತದ ಸಮೀಪದ 65 ವರ್ಷದ ವೃದ್ಧ, ಕಿರಾಣಿ ಅಂಗಡಿ ಮಾಲೀಕನಿಗೆ ಪಾಸಿಟಿವ್ ಬಂದಿದೆ.