ಜಿಲ್ಲೆ

ಬಾಗಿಲು ತೆರೆದು ಸೇವೆಯನು ಕೊಡೊ ಹರಿಯೆ...

Chitradurga

ಚಿತ್ರದುರ್ಗ: ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ ಕೂಗಿದರು ದನಿ ಕೇಳಲಿಲ್ಲವೆ ನರಹರಿಯೇ...ಎಂಬ ಸುನಾದದ ಗೀತೆಯೊಂದಿಗೆ ತಾಯಿ ಕನ್ಯಕಾ ಪರಮೇಶ್ವರಿ ಹಾಗೂ ವೆಂಕಟರಮಣ ಸ್ವಾಮಿ ದರ್ಶನಾನುಗ್ರಹ ಪಡೆದ ಭಕ್ತರು ಒಂದು ಕ್ಷಣ ವೈಕುಂಠಕ್ಕೆ ಹೋಗಿಬಂದಷ್ಟು ಖುಷಿಪಟ್ಟರು.

ಇಂತಹ ಸುಸಂದರ್ಭವನ್ನು ಸೃಷ್ಟಿಸಿದ್ದು ನಗರದ ಕನ್ಯಕಾ ಪರಮೇಶ್ವರಿ ಮತ್ತು ಕೆಳಗೋಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ. ವೈಕುಂಠ ಏಕಾದಶಿ ಪ್ರಯುಕ್ತ ಶ್ರೀದೇವಿ ಹಾಗೂ ಶ್ರೀಸ್ವಾಮಿಯ ದೇಗುಲಗಳನ್ನು ಬಹು ವಿಶೇಷವಾಗಿ ಸಿಂಗರಿಸಲಾಗಿತ್ತು. ಭಕ್ತರು ಪುಷ್ಪಾಲಂಕೃತ ವೈಕುಂಠ ದ್ವಾರದ ಮೂಲಕ ದೇಗುಲ ಪ್ರವೇಶಿಸಿ ದೇವರ ದರ್ಶನ ಪಡೆದು ಪುನೀತರಾದರು. ನೆರೆದಿದ್ದ ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ವೈಕುಂಠ ದ್ವಾರದ ಮೂಲಕ ದೇಗುಲ ಪ್ರವೇಶಿಸುವ ಭಕ್ತರು, ಶ್ರೀನಿವಾಸ, ಶ್ರೀಲಕ್ಷ್ಮಿ, ಪದ್ಮಾವತಿ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು. ಬೆಳಗ್ಗೆ 6ಕ್ಕೆ ಶ್ರೀಸ್ವಾಮಿ ಪ್ರಕಾರೋತ್ಸವ, ಉತ್ತರ ಬಾಗಿಲು ಪೂಜೆ, ಅಲಂಕಾರ ಸೇವೆ ನಡೆದವು.

ಗುರುರಾಜ್ ಮತ್ತು ಸಂಗಡಿಗರು, ಇಸ್ಕಾನ್ ಭಕ್ತಿ ವೃಂದದವರು ಭಕ್ತಿ ಗೀತೆಗಳನ್ನು ಹಾಡಿದರು. ಪಾಂಡುರಂಗ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.

ವೆಂಕಟರಮಣಸ್ವಾಮಿ ದೇವಸ್ಥಾನದ ಅಧ್ಯಕ್ಷ ಎಸ್.ಆರ್.ಲಕ್ಷ್ಮೀಕಾಂತರೆಡ್ಡಿ, ಉಪಾಧ್ಯಕ್ಷ ಶರಣ್‌ಕುಮಾರ್, ಕಾರ್ಯದರ್ಶಿ ಡಿ.ತಿಮ್ಮಣ್ಣ, ಜಂಟಿ ಕಾರ್ಯದರ್ಶಿ ಡಿ.ಎಸ್.ವೆಂಕಟೇಶ್, ಧರ್ಮದರ್ಶಿ ಟಿ.ಪುಟ್ಟಣ ಇತರರಿದ್ದರು.

ಆರ್ಯವೈಶ್ಯ ಸಂಘದ ಮಾಜಿ ಅಧ್ಯಕ್ಷ ಎಚ್. ಕೊಟ್ರೇಶ್ ಶೆಟ್ಟಿ, ಬಿಜೆಪಿ ಮುಖಂಡ ಬದರೀನಾಥ್, ನಗರಾಧ್ಯಕ್ಷ ಶಶಿಧರ್, ಎಂ.ಕೆ ರವೀಂದ್ರ, ಎಂ.ಆರ್ ಸಂಜೀವಶೆಟ್ಟಿ, ಎಲ್.ಆರ್, ವಾಸವಿ ಸುದ್ದಿಸಂಸ್ಥೆ ನಿರ್ವಾಹಕ ವೆಂಕಟೇಶ ಶೆಟ್ಟಿ ಇತರರಿದ್ದರು.