ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನ ಸಹಿತ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಸಂಸದ ಎ.ನಾರಾಯಣಸ್ವಾಮಿ ಹೇಳಿದರು.
ಸಂಸದರಾಗಿ ಒಂದು ವರ್ಷ ಪೂರ್ಣಗೊಳಿಸಿದ ಸಂದರ್ಭ ಶನಿವಾರ ಸುದ್ದಿಗಾರರ ಜತೆ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಿದ್ದೇನೆ ಎಂದರು.
ಅಜ್ಜಂಪುರ ಸಮೀಪ ರೈಲ್ವೆ ಕೆಳ ಸೇತುವೆ ನಿರ್ಮಾಣಕ್ಕಾಗಿ ಅಲ್ಲಿ ಪ್ರಗತಿಯಲ್ಲಿರುವ ಪರ್ಯಾಯ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿ ಮೇ 28ರೊಳಗೆ ಪೂರ್ಣಗೊಳ್ಳಲಿದೆ. ಅಲ್ಲಿಂದ ಹತ್ತಾರು ದಿನದೊಳಗೆ ಸೇತುವೆ ನಿರ್ಮಾಣವಾಗಲಿದೆ. ಭೂಸ್ವಾಧೀನ ಸಹಿತ ಯೋಜನೆ ಅನುಷ್ಠಾನಕ್ಕೆ ಇರುವ ಹತ್ತಾರು ತೊಡಕುಗಳನ್ನು ನಿವಾರಿಸಿ ತ್ವರಿತ ಅನುಷ್ಠಾನಕ್ಕೆ ಶ್ರಮಿಸುತ್ತೇನೆ ಎಂದು ತಿಳಿಸಿದರು.
ತುಮಕೂರು-ದಾವಣಗೆರೆ ನೇರ ರೈಲ್ವೆ ಮಾರ್ಗಕ್ಕೆ ಶೇ.50-50 ವೆಚ್ಚದ ಬದಲು ಕೇಂದ್ರವೇ ಪೂರ್ಣ ವೆಚ್ಚ ಭರಿಸಬೇಕು ಎಂದು ರೈಲ್ವೆ ಸಚಿವರನ್ನು ಕೋರಿದ್ದೇನೆ. ಈ ಕೆಲಸ ನಿಧಾನವಾಗಿರುವುದು ನಿಜ ಎಂದರು.
ಕೈಗಾರಿಕೆ ವಸಾಹತು ಸ್ಥಾಪನೆ, ಎಸ್‌ಇಪಿ-ಟಿಎಸ್‌ಪಿ, ನೂರು ಕೋಟಿ ರೂ. ವೆಚ್ಚದೊಂದಿಗೆ ಮದಕರಿ ಥೀಮ್‌ಪಾರ್ಕ್ ನಿರ್ಮಾಣಕ್ಕೂ ಪ್ರಯತ್ನಿಸುತ್ತೇನೆ. ಹಿರಿಯೂರು-ಹುಳಿಯಾರು ರಸ್ತೆ ಸಹಿತ ಜಿಲ್ಲೆಯಲ್ಲಿ ರಾಹೆ ಹಾಗೂ ಪ್ರಧಾನ ಮಂತ್ರಿ ಸಡಕ್ ಯೋಜನೆಗಳ ರಸ್ತೆಗಳು ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.
ಜಿಲ್ಲಾಡಳಿತ ಕಾರ್ಯ ತೃಪ್ತಿ ತಂದಿಲ್ಲ: ಕೋವಿಡ್-19 ಸೋಂಕು ತಡೆನಿಟ್ಟಿನಲ್ಲಿ ಜಿಲ್ಲೆಯ ಸುರಕ್ಷತೆಗೆ ಜಿಲ್ಲಾಡಳಿತ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬಹುದಾಗಿತ್ತು. ನರೇಗಾ ಕಾಮಗಾರಿಗಳೆಡೆ ನನಗೆ ಅತೃಪ್ತಿ ಇದೆ. ಅಧಿಕಾರಿ-ಗ್ರಾಪಂ ನಡುವಿನ ಸಂಪರ್ಕ ಕೊರತೆ ಮತ್ತು ಸರ್ಕಾರದ ನಿರ್ದೇಶನಗಳ ಸರಿಯಾಗಿ ಪಾಲಿಸದೆ ಕಾರ್ಮಿಕರಿಗೆ ಕೆಲಸ ಸಿಗುತ್ತಿಲ್ಲ. ಬಗರ್‌ಹುಕುಂ ಸಾಗುವಳಿ ಚೀಟಿ ಹಂಚಿಕೆಯೂ ವಿಳಂಬವಾಗಿದೆ ಎಂದು ಸಂಸದರು ಬೇಸರಿಸಿದರು.
ಮೆಡಿಕಲ್ ಕಾಲೇಜ್ ಆರಂಭಕ್ಕೆ ಯತ್ನ: ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಆರಂಭಕ್ಕೆ ಪ್ರಯತ್ನ ನಡೆದಿದೆ. ಇದೇ ಶೈಕ್ಷಣಿಕ ವರ್ಷದಿಂದ ಕೇಂದ್ರೀಯ ವಿದ್ಯಾಲಯ ಕಾರ್ಯಾರಂಭಕ್ಕೆ ಅನುಮತಿ ದೊರೆಯಲಿದೆ ಎಂದು ನಾರಾಯಣಸ್ವಾಮಿ ತಿಳಿಸಿದರು. ಲಾಕ್‌ಡೌನ್‌ನಿಂದಾಗಿ ಬಡ ವಿದ್ಯಾರ್ಥಿಗಳಿಗೆ ಖಾಸಗಿ ಕಾಲೇಜುಗಳಲ್ಲಿ ಪಿಯುಸಿ ಪ್ರವೇಶ ಪಡೆಯುವುದು ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಪಿಯು ಕಾಲೇಜುಗಳಿಗೆ ಹೊಸ ಕಟ್ಟಡ ಸಹಿತ ಹೆಚ್ಚಿನ ಮೂಲ ಸೌಕರ್ಯ ಒದಗಿಸಲಾಗುವುದು. ಡಿಎಂಎಫ್ ನಿಧಿಯಿಂದ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರ ಸುಧಾರಣೆಗೆ ಅನುದಾನ ಸಿಗಲಿದೆ ಎಂದರು.