ಚಿತ್ರದುರ್ಗ: ನಗರದ ಕರುವಿನಕಟ್ಟೆ ಸರ್ಕಲ್‌ನಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಮಂಗಳವಾರ ಶ್ರದ್ಧಾ ಭಕ್ತಿಯಿಂದ ಹೋಳಿಗೆ ಅಮ್ಮ ಪೂಜೆ ನೆರವೇರಿಸಲಾಯಿತು.
ನಗರದ ಕರುವಿನಕಟ್ಟೆ ವೃತ್ತ, ಸಣ್ಣ ಗರಡಿ, ದೊಡ್ಡ ಗರಡಿ, ದೊಡ್ಡಪೇಟೆ, ಜೋಗಿಮಟ್ಟಿ ರಸ್ತೆ, ಬುರುಜನಹಟ್ಟಿ, ಕಬೀರಾನಂದ ಆಶ್ರಮ ಸುತ್ತಮುತ್ತಲಿನ ಪ್ರದೇಶ ಸೇರಿದಂತೆ ಮತ್ತಿತರ ಬಡಾವಣೆಗಳ ನಾಗರಿಕರು ಹೋಳಿಗೆ ಅಮ್ಮನ ಪೂಜೆ ನೆರವೇರಿಸಿದರು.
ಹೋಳಿಗೆ ಅಮ್ಮನ ಪೂಜೆಗಾಗಿ ಮನೆಯಲ್ಲಿ ಮಹಿಳೆಯರು, ಯುವತಿಯರು ಬೆಳಗ್ಗೆಯಿಂದ ಉಪವಾಸವಿದ್ದು, ನೇಮದಿಂದ ತಯಾರಿಸಿದ ಹೋಳಿಗೆ ತುಪ್ಪ, ಅನ್ನ ಮೊಸರು ಎಡೆಯೊಂದಿಗೆ ಅಡಕೆ ತಟ್ಟೆ ಅಥವಾ ಊಟದ ಎಲೆಗಳಲ್ಲಿ ಮಣ್ಣಿನ ಕುಡಿಕೆಯಲ್ಲಿ ಬೇವಿನ ಸೊಪ್ಪು ಇಟ್ಟು, ಅರಿಶಿಣ, ಕುಂಕುಮ, ಬಳೆ, ತೆಂಗಿನ ಕಾಯಿ, ಬಾಳೆ ಹಣ್ಣು ಅರ್ಪಿಸುವ ಮೂಲಕ ಅಮ್ಮನ ಪೂಜೆ ನೆರವೇರಿಸಿದ ನಂತರ ನಗರದ ಕರುವಿನಕಟ್ಟೆ ವೃತ್ತದಲ್ಲಿನ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ ದೇವಸ್ಥಾನದ ಮುಂಭಾಗ ಸಾಲಾಗಿ ಇಡಲಾಗುತ್ತದೆ.
ಯಾವುದೇ ಜಾತಿ, ಜನಾಂಗಕ್ಕೆ ಸೀಮಿತವಾಗದ ಈ ಆಚರಣೆಯನ್ನು ಸಾಂಕ್ರಾಮಿಕ ರೋಗಗಳನ್ನು ತೊಲಗಿಸಲು ಬಹಳ ಹಿಂದಿನಿಂದಲೂ ಎಲ್ಲರೂ ಸಾಮೂಹಿಕವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಅಮ್ಮನನ್ನು ಬೇವಿನ ಸೊಪ್ಪು ಮುಚ್ಚಿ ಸಾಗಿಸುವುದರಿಂದ ಸೋಂಕುಗಳು ಸುಲಭವಾಗಿ ಪಸರಿಸುವುದಿಲ್ಲ ಎಂಬ ಪ್ರತೀತಿ ಕೂಡ ಇದೆ.
ಹಬ್ಬದ ಮಹತ್ವ:
ಬುಡಕಟ್ಟು ಸಂಸ್ಕೃತಿಗೆ ಹೆಸರಾದ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರತಿಯೊಂದು ಹಬ್ಬ, ಆಚರಣೆಗೆ ಇಲ್ಲಿ ಅದರದೇ ಆದ ನಂಬಿಕೆ, ಸಂಪ್ರದಾಯ ಹಾಗೂ ಸಂಸ್ಕೃತಿ ನೆಲೆಯಿದೆ. ಅದರ ಒಂದು ಭಾಗವೇ ಹೋಳಿಗೆ ಅಮ್ಮ. ಈ ಹಬ್ಬವನ್ನು ನಿರ್ದಿಷ್ಟ ದಿನಾಂಕ ಆಚರಿಸದಿದ್ದರೂ ಕೂಡ ಆಷಾಢ ಮಾಸದ ಮಂಗಳವಾರ ಅದಕ್ಕಾಗಿ ಮೀಸಲಿಡುತ್ತಾರೆ. ಹೋಳಿಗೆ ಅಮ್ಮ ಹಬ್ಬ ಆಚರಿಸಲಾಗುತ್ತದೆ.
ಹೋಳಿಗೆ ಅಮ್ಮ ವಿಶೇಷ:
ಮನೆಯಲ್ಲಿರುವ ಮಕ್ಕಳಿಗೆ ಅಮ್ಮ, ದಡಾರ, ಪ್ಲೇಗ್, ಸಿಡುಬು ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡದಂತೆ, ದುಷ್ಟ ಶಕ್ತಿ ಊರೊಳಗೆ ಬಾರದಂತೆ ಹಾಗೂ ಕಾಲಕಾಲಕ್ಕೆ ಮಳೆ ಆಗುವುದಕ್ಕಾಗಿ ಹುಟ್ಟಿಕೊಂಡಿದ್ದೇ ಈ ಹೋಳಿಗೆ ಅಮ್ಮ. ಈ ಹಬ್ಬವನ್ನು ಹಿರಿಯರಿಂದ ಕಿರಿಯರವರೆಗೂ ಭಯ, ಭಕ್ತಿಯಿಂದ ಆಚರಿಸುತ್ತಾ ಬರಲಾಗಿದೆ ಎನ್ನುವುದು ವಿಶೇಷ.