ಚಿತ್ರದುರ್ಗ: ಕರೊನಾ ಹಿನ್ನೆಲೆಯಲ್ಲಿ ಮುಂದೂಡಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಖಂಡಿತಾ ನಡೆಯಲಿದೆ. ಹೊಸ ವೇಳಾಪಟ್ಟಿಯನ್ನು ಲಾಕ್‌ಡೌನ್ ತೆರವು ಬಳಿಕ ಸರ್ಕಾರ ಘೋಷಿಸಲಿದೆ ಎಂದು ಡಿಡಿಪಿಐ ಕೆ.ರವಿಶಂಕರ ರೆಡ್ಡಿ ಹೇಳಿದರು.
ವಾರ್ತಾ ಇಲಾಖೆ ಮಂಗಳವಾರ ಆಯೋಜಿಸಿದ್ದ ಫೋನ್‌ಇನ್‌ನಲ್ಲಿ ಮಾತನಾಡಿ, ಪರೀಕ್ಷೆ ನಡೆಯುವುದಿಲ್ಲ ಎಂಬಿತ್ಯಾದಿ ವದಂತಿಗಳಿಗೆ ಪಾಲಕರು, ವಿದ್ಯಾರ್ಥಿಗಳು ಕಿವಿ ಕೊಡಬಾರದು. ವಿದ್ಯಾರ್ಥಿಗಳು ಸಮಯವನ್ನು ಸದುಪಯೋಗಪಡಿಸಿಕೊಂಡು ಪರೀಕ್ಷೆಗೆ ಸಿದ್ಧತೆ ನಡೆಸಬೇಕು. ವೇಳಾಪಟ್ಟಿ ಪ್ರಕಟಣೆ ಬಳಿಕ ಕನಿಷ್ಠ 8 ರಿಂದ 10 ದಿನ ಪರೀಕ್ಷೆ ಸಿದ್ಧತೆಗೆ ಕಾಲಾವಕಾಶ ದೊರೆಯಲಿದೆ. ಆದರೂ ವಿದ್ಯಾರ್ಥಿಗಳು ಆತಂಕ ಅಥವಾ ಒತ್ತಡಕ್ಕೆ ಒಳಗಾಗುವ ಅಗತ್ಯವಿಲ್ಲವೆಂದರು.
ಈ ಬಾರಿ ಜಿಲ್ಲೆಯಲ್ಲಿ ಮಕ್ಕಳಿಗೆ ಜೂನ್‌ನಿಂದ ಉತ್ತಮ ತರಬೇತಿ ನೀಡಿದ್ದು, ಶೇ. 100 ಫಲಿತಾಂಶ ಪಡೆಯುವ ಉದ್ದೇಶ ಹೊಂದಲಾಗಿದೆ. ಶಿಕ್ಷಕರು, ವಿದ್ಯಾರ್ಥಿಗಳ ಜತೆ ನಿರಂತರ ಸಂಪರ್ಕ ಹೊಂದಿ, ಕಠಿಣ ವಿಷಯಗಳ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸುತ್ತಿದ್ದಾರೆ. ಅಕ್ಷರ ದಾಸೋಹ ಆಹಾರಧಾನ್ಯ ವಿತರಿಸಿದ್ದಾರೆ ಎಂದರು.
ಇದೇ ವೇಳೆ ಹಲವು ಫೋನ್ ಕರೆಗಳಿಗೆ ಡಿಡಿಪಿಐ ಮತ್ತಿತರರು ಉತ್ತರಿಸಿದರು. ಪರೀಕ್ಷಾ ಜಿಲ್ಲಾ ನೋಡಲ್ ಅಧಿಕಾರಿ ವಿಜಯ ಕುಮಾರ್, ಡಿವೈಪಿಸಿಗಳಾದ ಸಿ.ಎಂ.ತಿಪ್ಪೇಸ್ವಾಮಿ ಮತ್ತು ನಾಗಭೂಷಣ್, ಶಿಕ್ಷಣಾಧಿಕಾರಿ ನರಸಿಂಹಪ್ಪ, ವಾರ್ತಾಧಿಕಾರಿ ಬಿ.ಧನಂಜಯಪ್ಪ, ವಿಜ್ಞಾನ ವಿಷಯ ಪರಿವೀಕ್ಷಕ ಎಚ್.ಗೋವಿಂದಪ್ಪ ಮತ್ತಿತರರು ಇದ್ದರು.
ಸಹಾಯವಾಣಿ ಕೇಂದ್ರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯಿಂದ ಸಹಾಯವಾಣಿ ಕೇಂದ್ರ ಪ್ರಾರಂಭಿಸಲಾಗಿದೆ. ಸಹಾಯವಾಣಿ ಸಂಖ್ಯೆ 08194-222259.ಇಂಗ್ಲಿಷ್‌ಗೆ-ಸಿ.ಎಲ್.ಏಕನಾಥ್-9741709469,ಸಂತೋಷ್-9916332740. ಗಣಿತ-ಬಸವಂತ ಕುಮಾರ್-9886677265,ಸಮಾಜ ವಿಜ್ಞಾನ-ತಿಪ್ಪೇಸ್ವಾಮಿ-9964674637, ವಿಜ್ಞಾನ-ಬಿ.ವಿ.ನಾಥ್-9448964735, ಕನ್ನಡ- ಹುರುಳಿ ಬಸವರಾಜ್-9902752457, ಹಿಂದಿ-ಶ್ರೀನಿವಾಸ್ ರೆಡ್ಡಿ-9980901545.