ಜಿಲ್ಲೆ

ಆಶಾ ಕಾರ‌್ಯಕರ್ತೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ

Chitradurga

ಚಿತ್ರದುರ್ಗ: ಸಹಕಾರ ಸಂಸ್ಥೆಗಳ ಮೂಲಕ ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡುವುದಾಗಿ ಸಹಕಾರ ಸಚಿವ ಎಚ್.ಟಿ.ಸೋಮಶೇಖರ್ ಭರವಸೆ ನೀಡಿದರು.

ಜಿಪಂ ಸಭಾಂಗಣದಲ್ಲಿ ಶುಕ್ರವಾರ, ಕರೋನಾ ವಾರಿಯರ್ಸ್ ಹೆಗ್ಗಳಿಕೆಗೆ ಪಾತ್ರರಾದ ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ರೂ. ಗಳ ಪ್ರೋತ್ಸಾಹ ಧನದ ಚೆಕ್ ವಿತರಿಸಿ ಮಾತನಾಡಿದರು.

ಸ್ವ ಸಹಾಯ ಸಂಘಗಳು, ಸ್ತ್ರೀಶಕ್ತಿ ಗುಂಪುಗಳು ಹಾಗೂ ಬಡವರ ಬಂಧು ಯೋಜನೆ ಮಾದರಿಯಲ್ಲೇ ಆಶಾ ಕಾರ್ಯಕರ್ತೆಯರಿಗೂ ಸಾಲ ನೀಡುವಂತೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ನೀಡಿರುವ ಸಲಹೆ ಸ್ವಾಗತಾರ್ಹ. ರಾಜ್ಯದ 42 ಸಾವಿರ ಆಶಾ ಕಾರ್ಯಕರ್ತೆಯರಿಗೆ ಡಿಸಿಸಿ ಬ್ಯಾಂಕ್ ಮತ್ತಿತರ ಸಹಕಾರ ಸಂಸ್ಥೆ ಗಳಿಂದ ಸಾಲ ಕೊಡಲು ಮುಖ್ಯಮಂತ್ರಿ ಹಾಗೂ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಪೂರ್ಣ ಸವಲತ್ತನ್ನು ಕಾರ್ಯಕರ್ತೆಯರಿಗೆ ಕಲ್ಪಿಸಲಾಗುವುದು ಎಂದರು.

ಕಳೆದ ವರ್ಷ ಸಹಕಾರಿ ಸಂಸ್ಥೆಗಳಿಂದ ಕೊಟ್ಟಿದ್ದ 13 ಸಾವಿರ ಕೋಟಿ ರೂ.ಕೃಷಿ ಸಾಲದ ಮೊತ್ತವನ್ನು ಈ ವರ್ಷ 14 ಸಾವಿರ ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಕಳೆದ ಏಪ್ರಿಲ್ 1ರಿಂದ ಸಾಲ ವಿತರಿಸಲು ಸರ್ಕಾರ ಆದೇಶಿಸಿದೆ. ಸಹಕಾರ ಕ್ಷೇತ್ರದಿಂದ ಸಿಎಂ ಪರಿಹಾರ ನಿಧಿಗೆ 51 ಕೋಟಿ ರೂ. ಕೊಡಲಾಗಿದೆ.

ರಾಜ್ಯದೆಲ್ಲ ಆಶಾ ಕಾರ‌್ಯಕರ್ತೆಯರಿಗೂ ಸಹಕಾರ ಸಂಸ್ಥೆಗಳಿಂದ ಪ್ರೋತ್ಸಾಹ ಧನ ವಿತರಿಸಲಾಗುತ್ತಿದೆ. ಯಾರಿಗಾದರೂ ಪ್ರೋತ್ಸಾಹ ಧನ ಬಾರದಿದ್ದಲ್ಲಿ ಡಿಸಿಸಿ ಬ್ಯಾಂಕ್, ಜಿಲ್ಲಾ ಸಹಕಾರಿ ರಿಜಿಸ್ಟ್ರಾರ್ ಅಥವಾ ಶಾಸಕರನ್ನು ಸಂಪರ್ಕಿಸುವಂತೆ ಕೋರಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಕರೋನಾ ಸಂದರ್ಭದಲ್ಲಿ ಜೀವ ಲೆಕ್ಕಿಸದೆ ದುಡಿದ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರನ್ನು ಶ್ಲಾಘಿಸಿದರು. ಆಶಾ ಕಾರ‌್ಯಕರ್ತೆಯರ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈಗ ನಡೆದಷ್ಟು ಕೆಲಸಗಳು ಹಿಂದೆಂದೂ ಸಹಕಾರ ಇಲಾಖೆಯಲ್ಲಿ ಆಗಿರಲಿಲ್ಲ ಎಂದರು. ಸಚಿವ ಭೈರತಿ ಬಸವರಾಜ ಕಾರ‌್ಯವೈಖರಿಯನ್ನೂ ಶಾಸಕರು ಶ್ಲಾಘಿಸಿದರು.

ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು, ಶಾಸಕರಾದ ಟಿ.ರಘುಮೂರ್ತಿ, ಗೂಳಿಹಟ್ಟಿ ಶೇಖರ್, ಕೆ.ಪೂರ್ಣಿಮಾ ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಸುಧಾಕರ್, ಎಂಡಿ ಎಂ.ಇಲಿಯಾಸ್‌ಉಲ್ಲಾ ಷರೀಫ್, ಡಿಎಚ್‌ಒ ಡಾ.ಸಿ.ಎಲ್.ಪಾಲಾಕ್ಷ ಮತ್ತಿತರರು ಇದ್ದರು.