ಜಿಲ್ಲೆ

ಆಹಾರ ಧಾನ್ಯ ಕಿಟ್ ಪಡೆಯಲು ನೂಕು ನುಗ್ಗಲು

Chitradurga

ಚಿತ್ರದುರ್ಗ: ಜಿಲ್ಲಾ ಯಾದವ ಗೊಲ್ಲರ ಸಂಘ ಬುಧವಾರ ವಿತರಿಸಿದ ಆಹಾರ ಧಾನ್ಯ ಕಿಟ್ ಪಡೆಯಲು ಏಕಾಏಕಿ ಸಾವಿರಾರು ಜನ ಮುಗಿ ಬಿದ್ದು, ಸಂಘಟಕರು ಕಂಗೆಡುವಂತಾಯಿತು. ನಗರದ ರಂಗಯ್ಯಬಾಗಿಲು ಬಳಿ ಜಿಲ್ಲಾ ಗೊಲ್ಲರ ಸಂಘದ ಹಾಸ್ಟೆಲ್ ಬಳಿ ಅಲೆಮಾರಿ, ಅರೆ ಅಲೆಮಾರಿ ಸಹಿತ ಎಲ್ಲ ವರ್ಗದ 1000 ಬಡವರಿಗೆ ಆಹಾರ ಕಿಟ್ ವಿತರಿಸಲು ನಿರ್ಧರಿಸಲಾಗಿತ್ತು. ಈ ಸಂಬಂಧ ಟೋಕನ್ ವಿತರಿಸಲಾಗಿತ್ತು.

ಆದರೆ ಕಿಟ್ ಪಡೆಯಲು ಬೆಳಗ್ಗೆಯಿಂದಲೇ ಮಹಿಳೆಯರ ಸಹಿತ ಸಾವಿರಾರು ಜನರು ಹಾಸ್ಟೆಲ್ ಬಳಿ ಜಮಾಯಿಸಿದ್ದರು. ಕೂಡಲೇ ಪರಿಸ್ಥಿತಿ ಹತೋಟಿಗೆ ಪೊಲೀಸರು ಹಾಗೂ ಸಂಘದ ಪ್ರಮುಖರು ಮುಂದಾದರು. ಟೋಕನ್ ಇದ್ದವರಿಗೆ ಕಿಟ್ ವಿತರಿಸುವುದಾಗಿ ಪೊಲೀಸರು ಹೇಳಿದರೂ ಗುಂಪು ಕರಗಲಿಲ್ಲ. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು, ಕಿಟ್ ವಿತರಣೆಗೆ ಆಗಮಿಸಿದ್ದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರ ಮನವಿ ಕೂಡ ಪ್ರಯೋಜನಕ್ಕೆ ಬರಲಿಲ್ಲ. ಕಿಟ್‌ಗಳೆಲ್ಲ ಖಾಲಿ ಆದ ಬಳಿಕ ಅನೇಕರು ಬರಿಗೈಯಲ್ಲಿ ಹಿಂದಿರುಗಿದರು.

ಜಿಲ್ಲಾ ಗೊಲ್ಲರ ಸಂಘದ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ಕಾರ್ಯದರ್ಶಿ ಬಿ.ಆನಂದಪ್ಪ, ಟಿ.ರಂಗಸ್ವಾಮಿ, ಕಿರಣ್‌ಕುಮಾರ್ ಪಲ್ಗು ಣೇಶ್, ಡಿ.ಸಿ.ಗೋವಿಂದಪ್ಪ, ಎನ್.ಮಹಾಂತೇಶ್, ಗಂಜಿಗಟ್ಟೆ ಮಧುಗೌಡ, ಟಿ.ತಿಮ್ಮಣ್ಣ, ಅರುಣ್‌ಕುಮಾರ್, ಆರ್.ಕೃಷ್ಣಪ್ಪ, ವೀರಭದ್ರಪ್ಪ ಮತ್ತಿತರರು ಇದ್ದರು.