ಜಿಲ್ಲೆ

ಹಲ್ಲೆ ತಡೆಗೆ ಪೊಲೀಸರ ಜತೆ ಕೈ ಜೋಡಿಸಿ

ಚಿತ್ರದುರ್ಗ: ಆಶಾ, ಅಂಗನವಾಡಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲಾಗುವ ಹಲ್ಲೆಗಳನ್ನು ತಡೆಯಲು ಪೊಲೀಸರೊಂದಿಗೆ ನೀವೂ ಕೈ ಜೋಡಿಸಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಮಾರ್ಗ ಮಧ್ಯೆ ಚಿತ್ರದುರ್ಗದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಇಡೀ ಪ್ರಪಂಚವೇ ಗಂಡಾಂತರಕ್ಕೆ ಸಿಲುಕಿರುವ ಈ ಸಮಯದಲ್ಲಿ ಪ್ರಾಣವನ್ನೇ ಪಣಕ್ಕೆ ಇಟ್ಟು ಆರೋಗ್ಯ ಸಮೀಕ್ಷೆಗೆ ತೆರಳುತ್ತಿರುವವರ ಮೇಲೆ ಕೆಲವರು ಹಲ್ಲೆ ನಡೆಸುತ್ತಿರುವುದು ಸರಿಯಲ್ಲ. ಇಂಥ ಪ್ರಕರಣಗಳಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಸರ್ಕಾರ ಹಿಂದೇಟು ಹಾಕದು ಎಂದರು.

ಕರೊನಾದಿಂದಾಗಿ ಇಡೀ ವಿಶ್ವವೇ ಇಂದು ಆರ್ಥಿಕ ತೊಂದರೆಗೆ ಸಿಲುಕಿ ಪರಿಸ್ಥಿತಿ ಶೋಚನೀಯವಾಗಿದ್ದರೂ ಸೋಂಕು ನಿಯಂತ್ರಣ ನಿಟ್ಟಿನಲ್ಲಿ ಜನರ ಸಹಕಾರ ಸರಿಯಾಗಿ ಸಿಗುತ್ತಿಲ್ಲವೆಂದು ಬೇಸರಿಸಿದರು.

ರಾಜ್ಯದಲ್ಲಿ 200ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿ, ಏಳು ಸಾವುಗಳಾಗಿವೆ. ಹೊಸದಿಲ್ಲಿಯ ನಿಜಾಮುದ್ದೀನ್ ಸಭೆಗೆ ಹೋಗಿ ಬಂದವರಿದ್ದರೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ವಿದೇಶ, ಹೊರ ರಾಜ್ಯಗಳಿಂದ ರಾಜ್ಯಕ್ಕೆ ಬಂದಿರುವವರ ಪೈಕಿ ಇನ್ನು ಕೆಲವು ತಪಾಸಣೆ ಮಾಡಿಸಿಕೊಂಡಿಲ್ಲವೆಂಬ ಸಂಶಯ ಇದೆ ಎಂದರು.

ಪಡಿತರ ಚೀಟಿ ಇಲ್ಲದವರಿಗೂ ಪಡಿತ ವಿತರಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.