ಜಿಲ್ಲೆ

ಚೀನಾ ವಸ್ತುಗಳ ಬಹಿಷ್ಕಾರಕ್ಕೆ ಕರೆ

Chitradurga

ಚಿತ್ರದುರ್ಗ: ಈಗಿರುವುದು 1962ರ ಭಾರತವಲ್ಲ, ಯಾವುದೇ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲು ನಮ್ಮ ದೇಶ ಈಗ ಅತ್ಯಂತ ಬಲಿಷ್ಠವಾಗಿದೆ ಎಂದು ಸಂಘ ಪರಿವಾರದ ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸಿದರು.

ಚೀನಾ ಗಡಿ ತಂಟೆಯಿಂದಾಗಿ ಹುತಾತ್ಮರಾದ ಭಾರತದ ವೀರ ಯೋಧರಿಗೆ ಶ್ರದ್ಧಾಂಜಲಿ, ಚೀನಾ ವಸ್ತುಗಳ ಬಹಿಷ್ಕಾರ ಹಾಗೂ ಚೀನಾ ವಿರುದ್ಧ ಕಠಿಣ ಕ್ರಮಕ್ಕೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ನಗರದ ಒನಕೆ ಓಬವ್ವ ವೃತ್ತದಲ್ಲಿ ಬುಧವಾರ ಪ್ರತಿಭಟಿಸಿದರು.

ಪ್ರಧಾನಿ ನರೇಂದ್ರ ಮೋದಿ ಧೀಮಂತ ನಾಯಕತ್ವ ನಮಗೆ ಸಿಕ್ಕಿದೆ. ನಮ್ಮ ಸೇನಾ ಶಕ್ತಿ ಅಪಾರವಾಗಿದೆ. ಅದನ್ನು ಮುನ್ನಡೆಸುವ ಧೀರ ನಾಯಕತ್ವವೂ ನಮಗಿದೆ. ನಮ್ಮ ವೀರ ಯೋಧರ ಸಾವಿಗೆ ಕಾರಣವಾದ ಚೀನಾದ ವಿರುದ್ಧ ಪ್ರತೀಕಾರ ತೆಗೆದುಕೊಳ್ಳಲೇ ಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಿಂದೇಟು ಹಾಕದು, ಸೇಡು ತೀರಿಸಿಕೊಳ್ಳುವುದು ಖಚಿತ ಎಂದರು.

ನಾಗರಿಕರು ನಾವು ಗಡಿಯಲ್ಲಿ ನಿಂತು ದೇಶವನ್ನು ಕಾಯಲಾಗದು. ಆದರೆ ಗಡಿ ಕಾಯುವ ಸೈನಿಕರಿಗೆ ದೇಶವಾಸಿಗಳು ನೈತಿಕ ಬೆಂಬಲ ಕೊಡ ಬೇಕಿದೆ. ಈ ನಿಟ್ಟಿನಲ್ಲಿ ಚೀನಾ ವಸ್ತುಗಳೆಲ್ಲವನ್ನು ಬಹಿಷ್ಕರಿಸುವ ಮೂಲಕ, ಆ ದೇಶಕ್ಕೆ ಭಾರತದಿಂದ ಹೋಗುತ್ತಿರುವ ವಾರ್ಷಿಕ 6 ಲಕ್ಷ ರೂ.ಕೋಟಿ ರೂ. ನಗದು ಹರಿವಿಗೆ ತಡೆ ಹಾಕಬೇಕಿದೆ. ನಮ್ಮ ದುಡ್ಡಿನಿಂದಲೇ ಚೀನಾ,ಭಾರತದ ವಿರುದ್ಧ ಮಸಲತ್ತು ನಡೆಸಿದೆ,ಭ ಯೋತ್ಪಾದನೆ ಬೆಂಬಲಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ಹಿಂದು ಮಹಾಗಣಪತಿ ಸಮಿತಿ ಅಧ್ಯಕ್ಷ ಟಿ.ಬದ್ರಿನಾಥ್, ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಬಾಬಣ್ಣ, ಬಂಜರಂಗದಳ ವಿಭಾಗ ಸಂಚಾಲಕ ಪ್ರಭಂಜನ್, ಜಿಲ್ಲಾ ಸಂಚಾಲಕ ಸಂದೀಪ್, ಜಿಲ್ಲಾ ಗೋರಕ್ಷ ಪ್ರಮುಖ್ ಪಿ.ರುದ್ರೇಶ್, ನಗರ ಅಧ್ಯಕ್ಷ ಶ್ರೀನಿವಾಸ್, ಸಂಚಾಲಕ ರಂಗಸ್ವಾಮಿ, ಪ್ರಮುಖರಾದ ವಿಠಲ್, ಶಶಿಧರ್, ರಾಜೇಶ್, ಭಾನು, ಶಕ್ತಿ, ರಂಗಸ್ವಾಮಿ, ಪರಿವಾರ ಕಾರ್ಯಕರ್ತರಾದ ಪವನ ಮದಕರಿ, ತೇಜು, ಸಿದ್ದು, ಹೇಮಂತ ಮತ್ತಿತರರು ಇದ್ದರು.