ಜಿಲ್ಲೆ

ಚೀನಾ ವಿರುದ್ಧ ಹೆಚ್ಚಿದ ಆಕ್ರೋಶ

Chitradurga

ಚಿತ್ರದುರ್ಗ: ವಿನಾ ಕಾರಣ ಕಾಲು ಕೆರೆದು ಜಗಳಕ್ಕೆ ನಿಂತಿರುವ ಚೀನಾ ದೇಶದ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದ್ದು, ನಗರದಲ್ಲಿ ಗುರುವಾರ ಚೀನಾದ ಕುಟೀಲತೆ ಖಂಡಿಸಿ ಪ್ರತಿಭಟನೆ ಜರುಗಿದವು.

ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ಪಕ್ಷದ ಕಚೇರಿ ಬಳಿ ಪ್ರತಿಭಟಿಸಿದರು. ಬಳಿಕ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಚೀನಾ ವಸ್ತುಗಳನ್ನು ಮಾರಾಟ ಮಾಡದಂತೆ ಸ್ವದೇಶ ಜಾಗೃತಿ ಪತ್ರ ವಿತರಿಸಿದರು.

ನಮ್ಮ ಹೋರಾಟ ನಮ್ಮ ದೇಶದ ಉಳಿವಿಗಾಗಿ. ಈ ಕಾರ್ಯದಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು. ದೇಶದ ವಿಷಯದಲ್ಲಿ ನಾವೆಲ್ಲರೂ ಒಗ್ಗೂಟ್ಟು ಪ್ರದರ್ಶಿಸಬೇಕು ಎಂದು ಹೇಳಿದರು.

ಚೀನಾ ವಿರುದ್ಧ ಆ ದೇಶದ ವಸ್ತುಗಳನ್ನು ಮಾರಾಟ ಮಾಡದೇ, ಬಳಸದೇ ತಕ್ಕ ಪಾಠ ಕಲಿಸಬೇಕು. ಶಾಂತಿ, ಸೌಹಾರ್ಧತೆ ಭಾರತ ದೇಶದ ವಿರುದ್ಧ ಪಿತೂರಿ ನಡೆಸುತ್ತಿರುವ ಚೀನಾ ವಿರುದ್ಧ ಆರ್ಥಿಕ ಸಮರ ಸಾರಬೇಕು ಎಂದರು.

ಯುವ ಘಟಕದ ಜಿಲ್ಲಾಧ್ಯಕ್ಷ ಎಂ.ಪಿ.ಮಧು ಪಾಲೇಗೌಡ, ಉಪಾಧ್ಯಕ್ಷ ಕರಿಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿಕಾಸ್,ಎನ್.ಎಸ್.ಮಹಮ್ಮದ್ ರಫೀ, ಮಹಮ್ಮದ್ ಖುದ್ದೂಸ್, ತಾಲೂಕು ಅಧ್ಯಕ್ಷ ಹಸನ್‌ತಾಹೀರ್, ಹಿರಿಯೂರು ತಾಲೂಕು ಅಧ್ಯಕ್ಷ ಮಹಮ್ಮದ್ ರಫೀ, ಮುಖಂಡರಾದ ಸಿಗ್ಮತ್ ಉಲ್ಲಾ, ಅಶೋಕ್ ನಾಯ್ಡು, ಸಂದೀಪ್, ಸಂತೋಷ್ ಮತ್ತಿತರರು ಇದ್ದರು.

ಅಭಿಯಾನ: ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯಕರ್ತರು ಚಿತ್ರದುರ್ಗದ ಪಕ್ಷದ ಕಚೇರಿಯಲ್ಲಿ ಗುರುವಾರ, ಚೀನಾ ಕುತಂತ್ರದಿಂದಾಗಿ ಹುತಾತ್ಮರಾದ ಭಾರತೀಯ ವೀರಯೋಧರರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಜತೆಗೆ ಚೀನಾ ವಸ್ತುಗಳ ಬಹಿಷ್ಕಾರ ಸಂಕಲ್ಪ ಅಭಿಯಾನ ನಡೆಸಿದರು.