ಜಿಲ್ಲೆ

ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಶೇ.65 ಮತದಾನ

Chitradurga

ಚಿತ್ರದುರ್ಗ: ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ ಮತದಾನ ಜಿಲ್ಲೆಯ 32 ಮತಗಟ್ಟೆಗಳಲ್ಲಿ ಬುಧವಾರ ಶಾಂತಿಯುತವಾಗಿ ಜರುಗಿತು. 21,021 ಮಂದಿ ಪೈಕಿ ಶೇ.65ಕ್ಕೂ ಹೆಚ್ಚಿನ ಮಂದಿ ಮತದಾನ ಮಾಡಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ್‌ಲ್ಲಿದ್ದ ಚಿತ್ರದುರ್ಗ ನಗರ, ಕಸಬಾ 4 ಮತಗಟ್ಟೆಗಳಲ್ಲಿ ಬೆಳಗ್ಗೆಯಿಂದಲೇ ತುರುಸಿನ ಮತದಾನಕ್ಕೆ ಚಾಲನೆ ಸಿಕ್ಕಿತು. ಕುಡಾ ಅಧ್ಯಕ್ಷ ಟಿ.ಬದ್ರಿನಾಥ್, ಡಿಸಿಸಿ ಮಾಜಿ ಅಧ್ಯಕ್ಷ ಫಾತ್ಯರಾಜನ್ ಸೇರಿ ಅನೇಕರು, ರಾಜಕೀಯ ಪ್ರಮುಖರು ಮತ ಚಲಾಯಿಸಿದರು.
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಸಹಿತ ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರು ಕೊನೆ ಕ್ಷಣದಲ್ಲಿ ಮತದಾರನ ಮವೊಲಿಕೆಯ ಕಸರತ್ತು ನಡೆಸಿದರು.
ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ಅಭ್ಯರ್ಥಿ ಚಿದಾನಂದ ಎಂ.ಗೌಡ, ಜಿಲ್ಲಾಧ್ಯಕ್ಷ ಎ.ಮುರುಳಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಮಾಜಿ ಅಧ್ಯಕ್ಷ ಎಂ.ಕೆ.ಫಾತ್ಯರಾಜನ್, ಮೈಲಾರಪ್ಪ, ಕೆ.ಪಿ.ಸಂಪತ್‌ಕುಮಾರ್, ಜೆಡಿಎಸ್ ಅಭ್ಯರ್ಥಿ ಚೌಡರೆಡ್ಡಿ ತೂಪಲ್ಲಿ, ರಾಜ್ಯ ಕಾರ್ಯದರ್ಶಿ ಬಿ.ಕಾಂತರಾಜ್, ಪ್ರತಾಪ್‌ಜೋಗಿ ಅನೇಕರು ಮತಗಟ್ಟೆ ಬಳಿ ಜಮಾಯಿಸಿದ್ದರು.
ಮತಗಟ್ಟೆ ಆವರಣದೊಳಗೆ ಪರಸ್ಪರ ಅಂತರ ಕಾಪಾಡಿಕೊಂಡಿದ್ದರೂ, ಒಮ್ಮೊಮ್ಮೆ ಸರತಿಯಲ್ಲಿದ್ದವರು ಅಂತರ ಮರೆಯುತ್ತಿದ್ದರು. ಆವರಣದ ಹೊರಗಂತೂ ಪರಸ್ಪರ ಅಂತರ ಸಂಪೂರ್ಣವಾಗಿ ಮಾಯವಾಗಿತ್ತು. ಪೊಲೀಸರು ಗುಂಪನ್ನು ಚದುರಿಸಲು ಹೈರಾಣಾಗುತ್ತಿದ್ದರು.
ಎಲ್ಲ ಮತಗಟ್ಟೆಗಳಿಗೂ ಪಿಪಿಇ ಸಹಿತ ಮೆಡಿಕಲ್ ಕಿಟ್ ಒದಗಿಸಲಾಗಿತ್ತು. ಸ್ಯಾನಿಟೈಸೆಷನ್, ಪ್ರತಿ ಮತದಾರರಿಗೆ ಒಂದು ಹ್ಯಾಂಡ್ ಗ್ಲೌಸ್ ವಿತರಣೆ ಸಹಿತ ಕೋವಿಡ್ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು.