ಚಿತ್ರದುರ್ಗ: ಜಾತ್ಯತೀತ ದೇಶದಲ್ಲಿ ಧರ್ಮವೂ, ರಾಜಕಾರಣಿಗಳಿಗೆ ವೋಟು-ಸೀಟಿನ ಅಸ್ತ್ರವಾಗಿದೆ ಎಂದು ಸಾಹಿತಿ ಬಿ.ಎಲ್.ವೇಣು ಬೇಸರ ವ್ಯಕ್ತಪಡಿಸಿದರು.
ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಏತಕ್ಕಾಗಿ? ಎಂಬ ವಿಷಯದ ಕುರಿತಂತೆ ಚಿತ್ರದುರ್ಗ ಜನಜಾಗೃತಿ ಅಭಿಯಾನದಿಂದ ಪತ್ರಕರ್ತರ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ರಾಜಕಾರಣಿಗಳಿಗೆ ಧರ್ಮ ಬಂಡವಾಳವಾಗಿದೆ. 70 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಮುಸ್ಲಿಮರನ್ನು ಓಲೈಸಿರಬಹುದು. ಆದರೆ, ದ್ವೇಷದ ಬೀಜವನ್ನು ಬಿತ್ತಲಿಲ್ಲ. ರಾಷ್ಟೀಯತೆಯನ್ನು ಮಾರ್ಕೆಟಿಂಗ್ ಮಾಡಿಕೊಂಡಿರುವ ಬಿಜೆಪಿ, ಗಾಂಧಿ, ಪಟೇಲ್, ಅಂಬೇಡ್ಕರ್, ವಿವೇಕಾನಂದರ ಸಹಿತ ಅನೇಕ ಮಹನೀಯರನ್ನು ಹೈಜಾಕ್ ಮಾಡಿದೆ ಎಂದು ದೂರಿದರು.
ಏನೇ ಮಾತನಾಡಿದರೂ ಒಳಗೆ ಹಾಕುತ್ತಾರೆಂಬ ಭಯ ಕಾಡುತ್ತಿದೆ. ಆದರೆ, ಸಂಸದರೊಬ್ಬರು ಮಾತ್ರ ಮನ ಬಂದಂತೆ ಮಾತನಾಡುತ್ತಾ ಆತಂಕಕ್ಕೆ ಕಾರಣವಾಗುತ್ತಿದ್ದಾರೆ. ದೇಶದ ಆರ್ಥಿಕತೆ ಕುಸಿದು, ನಿರುದ್ಯೋಗ ಹೆಚ್ಚುತ್ತಿದೆ. ರೈತರ ಆದಾಯ ದ್ವಿಗುಣ ಬದಲು ಅವರ ಆತ್ಮಹತ್ಯೆ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಭರವಸೆಗಳನ್ನು ಈಡೇರಿಸದ ಕೇಂದ್ರ ಸರ್ಕಾರ ಸಂವಿಧಾನಕ್ಕೆ ವಿರುದ್ಧವಾಗಿ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಅನ್ನು ಜಾರಿಗೊಳಿಸಿದೆ. ಇದರ ವಿರುದ್ಧ ಯುವಜನರು ಶಾಂತಿಯುತ ಪ್ರತಿಭಟನೆ ಮುಂದುವರಿಸಬೇಕು ಎಂದು ಮನವಿ ಮಾಡಿದರು.
ಚಿಂತಕ ಜೆ.ಯಾದವರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ವಕೀಲ ಬಿ.ಕೆ.ರಹಮತ್‌ವುಲ್ಲಾ, ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‌ಬಾಬು, ಮುಖಂಡರಾದ ಸಿ.ಸುರೇಶ್‌ಬಾಬು, ಸಿ.ಕೆ.ಗೌಸ್‌ಪೀರ್, ಎಚ್.ರವಿಕುಮಾರ್ ಇದ್ದರು.
ಕೈ-ಕಮಲ ನಡುವಿನ ಹೋರಾಟವಲ್ಲ: ಸಿಎಎಯಿಂದ ಮುಸ್ಲಿಂ ಸೇರಿ ದೇಶದ ಶೇ.95 ದುಡಿಯುವ ಜನರಿಗೆ ತೊಂದರೆ ಆಗುತ್ತದೆ. ಸಿಎಎ ವಿರುದ್ಧದ ಹೋರಾಟವನ್ನು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಹೋರಾಟವೆಂದು ಬಿಂಬಿಸಲಾಗುತ್ತಿದೆ ಎಂದು ದಿಕ್ಸೂಚಿ ಭಾಷಣಕಾರ ಎಐಡಿವೈಒ ಅಖಿಲ ಭಾರತ ಅಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ ಬೇಸರಿಸಿದರು. ಪಾಕಿಸ್ತಾನವನ್ನು ತೋರಿಸಿ ಆತಂಕಕಾರಿ ವಾತಾವರಣ ಸೃಷ್ಟಿಸಲಾಗುತ್ತಿದೆ. ಆದರೆ, ಪಾಕಿಸ್ತಾನದಲ್ಲೂ ಪ್ರಜಾತಾಂತ್ರಿಕ ಮನಸುಗಳಿವೆ. ಸಿಎಎ ವಿರುದ್ಧದ ಹೋರಾಟ ಜನತಾಂತ್ರಿಕವಾಗಿರಲಿ. ಇದರಲ್ಲಿ ಭಾಷೆ, ಧರ್ಮ, ಜಾತಿ ಮತ್ತು ಪ್ರದೇಶ ನುಸುಳಬಾರದು. ಈ ಹೋರಾಟದಿಂದ ಚುನಾವಣಾ ರಾಜಕಾರಣ ಲಾಭ ಪಡೆಯುವಂತಾಗಬಾರದು ಎಂದು ತಿಳಿಸಿದರು.