ಚಿತ್ರದುರ್ಗ: ಲಾಕ್‌ಡೌನ್ ಪರಿಣಾಮ ವಿದ್ಯುತ್ ವಿತರಣಾ ಕಂಪನಿಗಳ ಪ್ರತಿನಿಧಿಗಳು ವಿದ್ಯುತ್ ಬಿಲ್ ವಸೂಲಿ ಗುರಿ ತಲುಪುವ ಬಗೆ ಹೇಗೆ ಎಂಬ ಸಂದಿಗ್ಧತೆಗೆ ಸಿಲುಕಿದ್ದಾರೆ.
ವಿದ್ಯುತ್ ವಿತರಣಾ ಕಂಪನಿಗಳಾದ ಚೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಮೆಸ್ಕಾಂ,ಬೆಸ್ಕಾಂ ಸಿಬ್ಬಂದಿ ಇದೀಗ ವಸೂಲಾತಿ ಗುರಿ ತಲುಪುವ ಜತೆಗೆ ಆರೋಗ್ಯ ಕಾಪಾಡಿಕೊಳ್ಳುವ ಸವಾಲು ಎದುರಿಸುತ್ತಿದ್ದಾರೆ.
ಗ್ರಾಮ ವಿದ್ಯುತ್ ಪ್ರತಿನಿಧಿಗಳು ಗುರಿ ತಲುಪದಿದ್ದರೆ ವೇತನದಲ್ಲಿ 600 ರೂ. ಕಡಿತವಾಗುತ್ತದೆ. ಹಾಗೆಂದು ಕೆಲಸಕ್ಕೆ ಹೋಗಿ ಸೋಂಕು ತಗುಲಿದರೆ ಏನೆಂಬ ಭೀತಿ ಅವರನ್ನು ಕಾಡಿದೆ.
ಗ್ರಾಮೀಣ ಭಾಗದಲ್ಲಿ ಮೀಟರ್ ರೀಡಿಂಗ್ ಮತ್ತು ವಿದ್ಯುತ್ ಬಿಲ್ ವಸೂಲಿಗೆ ಗ್ರಾಪಂಗೆ ಒಬ್ಬರಂತೆ, ಮಾಸಿಕ 12 ಸಾವಿರ ರೂ. ವೇತನದೊಂದಿಗೆ 3600 ಜಿವಿಪಿಗಳು ರಾಜ್ಯದಲ್ಲಿ ನೇಮಕವಾಗಿದ್ದಾರೆ. ವಸೂಲಾದ ಮೊತ್ತವನ್ನು ಇವರು ತಾಲೂಕು ಕೇಂದ್ರದ ನಿಗದಿತ ಬ್ಯಾಂಕ್‌ಗೆ ಜಮಾ ಮಾಡುತ್ತಾರೆ.
ಆದರೆ, ಈಗ ಯಾರೂ ಹೊರಗೆ ಬರಬೇಡಿ ಎಂದು ರಾಜ್ಯ ಸರ್ಕಾರ ಹೇಳಿದೆ.
ಈ ಸಮಯದಲ್ಲಿ ಪ್ರತಿ ಮನೆ-ಮನೆಗೆ ಹೋಗದಿದ್ದರೂ, ಒಂದೆಡೆ ಕುಳಿತು ವಸೂಲಿ ಮಾಡುವಂತೆ ಅಧಿಕಾರಿಗಳು ಹೇಳುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಇದರಿಂದ ಕಂಗೆಟ್ಟಿರುವ ಜಿವಿಪಿಗಳು ಕೆಲ ದಿನಗಳ ಮಟ್ಟಿಗೆ ವಸೂಲಿ ಕೆಲಸ ಮುಂದೂಡಿ, ಕರೊನಾ ಭೀತಿ ಸಂಪೂರ್ಣ ನಿವಾರಣೆಯಾದ ಬಳಿಕ ಪೂರ್ಣ ಪ್ರಮಾಣದಲ್ಲಿ ವಸೂಲಿ ಮಾಡಿಕೊಡುವುದಾಗಿ ಹಿರಿಯ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.