ಜಿಲ್ಲೆ

ಸಿಇಒ-ಸದಸ್ಯರ ಮಧ್ಯೆ ಅನುದಾನ ಸದ್ದು

Chitradurga

ಚಿತ್ರದುರ್ಗ: 14ನೇ ಹಣಕಾಸು ಯೋಜನೆಯ ಅನುದಾನ ಬಳಕೆಗೆ ಸಿಇಒ ಅನುಮತಿ ಕೊಟ್ಟಿಲ್ಲವೆಂದು ಸದಸ್ಯರು, ಕೊಟ್ಟಿದ್ದೇನೆ ಎಂದು ಸತ್ಯಭಾಮಾ…

ಶನಿವಾರ ಆಯೋಜಿಸಿದ್ದ ಜಿಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಮತ್ತು ಸಿಇಒ ಮಧ್ಯೆ ಕ್ರಿಯಾಯೋಜನೆಗೆ ಸಂಬಂಧಿಸಿದಂತೆ ನಡೆದ ಚರ್ಚೆ ಇದು.

ಮದಕರಿಪುರ ಗ್ರಾಪಂ 14ನೇ ಹಣಕಾಸು ಆಯೋಗದ ಅನುದಾನ 50 ಲಕ್ಷ ರೂ. ವೆಚ್ಚದ ಕ್ರಿಯಾ ಯೋಜನೆಗೆ ಸಿಇಒ ಅನುಮತಿ ಕೊಟ್ಟಿಲ್ಲವೆಂದು ಗುರುಮೂರ್ತಿ ಆರೋಪಿಸಿದರು.

ಜಿಲ್ಲೆಯ 189 ಗ್ರಾಮ ಪಂಚಾಯಿಗಳಲ್ಲಿ ನಾಲ್ಕನ್ನು ಹೊರತು ಪಡಿಸಿ ಉಳಿದೆಲ್ಲ ಪಂಚಾಯಿತಿಗಳಿಗೆ ಅನುಮೋದನೆ ಕೊಟ್ಟಿದ್ದೇನೆ ಎಂದು ಸಿಇಒ ಸ್ಪಷ್ಟಪಡಿಸಿದರು.

ಆದರೆ, ಸಂಬಂಧಿಸಿದ ಕೇಸ್‌ವರ್ಕರ್ ಹಾಜರುಪಡಿಸಿದ ಕಡತದಲ್ಲಿ 2019 ನ.8ರಂದು ಚರ್ಚಿಸಿ ಎಂದು ಪಿಡಿಒಗೆ ತಾವು ಸೂಚಿಸಿದ್ದೀರಾ. ಆದರೆ, ಇಲ್ಲಿಯವರೆಗೂ ಚರ್ಚಿಸಿಲ್ಲ, ಆದ್ದರಿಂದ ಪಿಡಿಒ ಅವರನ್ನು ಸಸ್ಪೆಂಡ್ ಮಾಡಬೇಕೆಂದು ಸದಸ್ಯರು ಪಟ್ಟು ಹಿಡಿದರು. ಸಿಇಒ ಸಭೆಗೆ ತಪ್ಪು ಮಾಹಿತಿ ಕೊಟ್ಟಿದ್ದಾರೆ ಎಂದು ಪ್ರಕಾಶಮೂರ್ತಿ, ನಾಗೇಂದ್ರನಾಯ್ಕ ಆರ್.ಗೀತಾ, ಸಿ.ಬಿ.ಪಾಪಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಶೌಚಗೃಹ ನಿರ್ಮಾಣದಲ್ಲಿ ಹಿನ್ನೆಡೆಯಾಗಿದೆ ಎಂಬ ಕಾರಣಕ್ಕೆ ಅನುದಾನಕ್ಕೆ ಕ್ಲಿಯರೆನ್ಸ್ ಕೊಟ್ಟಿಲ್ಲ. ಕೆಲವೊಮ್ಮೆ ಪಿಡಿಒಗಳೇ ನನ್ನ ಮಾತು ಕೇಳುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ ಸಿಇಒ ಸತ್ಯಭಾಮಾ, ಪ್ರಗತಿ ಸಾಧಿಸದೇ ಇರುವ ಗ್ರಾಪಂ ಪಿಡಿಒಗಳಿಂದ ಮುಚ್ಚಳಿಕೆ ಬರೆಸಿಕೊಂಡು ಅನುಮತಿ ಕೊಡುವುದಾಗಿ ಹೇಳಿದರು.

ತರಾತುರಿ ಖರೀದಿ: ಮಾರ್ಚ್ ತಿಂಗಳಲ್ಲಿಯೇ ಆರೋಗ್ಯ ಇಲಾಖೆ ತರಾತುರಿಯಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಔಷಧ, ಪೀಠೋಕರಣಗಳ ಖರೀದಿ ಮಾಡುತ್ತದೆ. ಇದಕ್ಕೆ ಕಾರಣವೇನು ಎಂದು ಸೌಭಾಗ್ಯ ಬಸವರಾಜನ್ ಮಾಹಿತಿ ಕೇಳಿದರು.

ಆರ್‌ಸಿಎಚ್ ಅಧಿಕಾರಿ ಡಾ.ಕುಮಾರಸ್ವಾಮಿ ಮಾಹಿತಿಗೆ ಚೇತನಾ ಪ್ರಸಾದ್, ಜಯಪ್ರತಿಭಾ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಅನಂತ್ ಅಸಮಾಧಾನ ವ್ಯಕ್ತಪಡಿಸಿದರು.

ಆರ್‌ಐಡಿಎಫ್ ಅನುದಾನದಡಿ ಜಿಲ್ಲೆಯಲ್ಲಿ 300 ಶಾಲಾ ಕೊಠಡಿಗಳು ನಿರ್ಮಾಣವಾಗಿವೆ ಎಂದು ಡಿಡಿಪಿಐ ಕೆ.ರವಿಶಂಕರ ರೆಡ್ಡಿ ಹೇಳಿದರು.

ಕೋರಂ ಕಾರಣಕ್ಕೆ ಸಭೆ ಅರ್ಧ ತಾಸು ವಿಳಂಬವಾಗಿ ಆರಂಭವಾಯಿತು. ಮಾಜಿ ಸಚಿವ ಡಿ.ಮಂಜುನಾಥ್ ನಿಧನಕ್ಕೆ ಸಭೆ ಸಂತಾಪ ಸೂಚಿಸಿತು.

ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ನೀವ್ಯಾರು ಎಂದ್ರು: ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ನೀವ್ಯಾರು ಎಂದು ಪ್ರಶ್ನಿಸುವ ಮೂಲಕ ನನ್ನನ್ನು ಅವಮಾನ ಮಾಡಿದ್ದಾರೆಂದು ಆರ್.ನರಸಿಂಹರಾಜ, ಸಿಇಒ ವಿರುದ್ಧ ಆರೋಪ ಮಾಡಿದರು. ಆ ರೀತಿ ಮಾತನಾಡಿಲ್ಲವೆಂದು ಸಿಇಒ ಸ್ಪಷ್ಟಪಡಿಸಿದರು. ಮಧ್ಯ ಪ್ರವೇಶಿಸಿದ ಅಧ್ಯಕ್ಷೆ ಮತ್ತು ಕೆಲ ಸದಸ್ಯರು ಪರಿಸ್ಥಿತಿ ತಿಳಿಗೊಳಿಸಿದರು.

ಅಯೋಧ್ಯೆ ಟ್ರಸ್ಟ್‌ಗೆ ವಾಲ್ಮೀಕಿ ಶ್ರೀ ನೇಮಿಸಿ: ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ರಾಜನಹಳ್ಳಿ ವಾಲ್ಮೀಕಿ ಮಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಅವರನ್ನು ಟ್ರಸ್ಟಿಯಾಗಿ ನೇಮಿಸಬೇಕು. ಹಿಂದುಳಿದ ವರ್ಗಗಳ ಆಯೋಗದ ಆರ್ಥಿಕ, ಸಾಮಾಜಿಕ ಜಾತಿ ಗಣತಿ ವರದಿ ಸ್ವೀಕರಿಸಬೇಕೆಂದು ಆರ್.ಕೃಷ್ಣಮೂರ್ತಿ ಮಂಡಿಸಿದ ವಿಷಯವನ್ನು ಸಭೆ ಅಂಗೀಕರಿಸಿತು.

ಆಯುಷ್ ಆಸ್ಪತ್ರೆಗೆ ಐದು ಎಕರೆ ಜಮೀನು: ಜಿಲ್ಲಾ ಆಯುಷ್ ಆಸ್ಪತ್ರೆ ನಿರ್ಮಾಣಕ್ಕೆ ನಗರದ ಹೊರವಲಯ ಇಂಗಳದಾಳ್‌ನಲ್ಲಿ ಜಿಲ್ಲಾಧಿಕಾರಿ, 5 ಎಕರೆ ಭೂಮಿ ಮಂಜೂರು ಮಾಡಿದ್ದಾರೆಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ವಿಶ್ವನಾಥ್ ಹೇಳಿದರು. ಇಲಾಖೆಗೆ ಪ್ರಸಕ್ತ ವರ್ಷ 64.91 ಲಕ್ಷ ರೂ.ಅನುದಾನ ಬಿಡುಗಡೆಯಾಗಿದೆ. ಹೊಸದುರ್ಗದಲ್ಲಿ 56 ಲಕ್ಷ ರೂ.ವೆಚ್ಚದಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಿಸಲಾಗುವುದು ಎಂದರು.

ಹಾಸ್ಟೆಲ್‌ಗಳಲ್ಲಿ ಅವ್ಯವಸ್ಥೆ: ಫೋಟೋಗಳನ್ನು ಪ್ರದರ್ಶಿಸುವ ಮೂಲಕ ವಿಜಯಲಕ್ಷ್ಮೀ ಪ್ರಕಾಶ್, ಹಾಸ್ಟೆಲ್‌ಗಳ ಸಮಸ್ಯೆಗಳನ್ನು ಸಭೆ ಗಮನಕ್ಕೆ ತಂದರು. ಪ್ರತಿಕ್ರಿಯಿಸಿದ ಜಿಲ್ಲಾ ಬಿಸಿಎಂ ಇಲಾಖೆ ಅಧಿಕಾರಿ ಅವಿನ್, ತಾವು ತೋರಿಸುತ್ತಿರುವ ಫೋಟೋ ಹಳೆಯದಾಗಿವೆ ಎಂದರು.

ಅಕ್ರಮದ ವಾಸನೆ?: ಜಿಲ್ಲೆಯ 116 ಕೆರೆಗಳಲ್ಲಾದ ಮೀನು ಹರಾಜು ಪ್ರಕ್ರಿಯಿಂದ 94 ಲಕ್ಷ ರೂ. ಗಳನ್ನು ಮೀನುಗಾರಿಕೆ ಇಲಾಖೆ ಸಂಗ್ರಹಿಸಿದೆ. ಜಿಲ್ಲೆಯ ಸಾಣೇಹಳ್ಳಿ, ಮಲ್ಲಾಪುರದಂಥ 2 ದೊಡ್ಡ ಕೆರೆಗಳಿಂದ 34 ಲಕ್ಷ ರೂ., ಉಳಿದಂತೆ 114 ಕೆರೆಗಳಿಂದ 60 ಲಕ್ಷ ರೂ. ಸಂಗ್ರಹವಾಗಿದ್ದಯಮ ಅಕ್ರಮ ನಡೆದಿರುವ ಸಾಧ್ಯತೆಗಳಿವೆ ಎಂದು ಬಿ.ಪಿ.ಪ್ರಕಾಶಮೂರ್ತಿ ಸಂಶಯ ವ್ಯಕ್ತಪಡಿಸಿದರು. ಯಾವುದೇ ಅವ್ಯವಹಾರ ನಡೆದಿಲ್ಲವೆಂದು ಇಲಾಖೆ ಅಧಿಕಾರಿ ಶ್ರೀಧರ್ ಹೇಳಿದರು.