ಚಿತ್ರದುರ್ಗ: ಜನಗಣತಿ ಮತ್ತು ಎನ್‌ಪಿಆರ್ (ರಾಷ್ಟ್ರೀಯ ಜನಸಂಖ್ಯಾ) ನೋಂದಣಿಯನ್ನು ಯಾವುದೇ ಗೊಂದಲವಿಲ್ಲದೆ, ವ್ಯವಸ್ಥಿತವಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಜನಗಣತಿಯ ಅಧಿಕಾರಿಗಳಿಗೆ ಸೂಚಿಸಿದರು.
ಲೋಕೋಪಯೋಗಿ ಇಲಾಖೆಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜನಗಣತಿ, ಎನ್‌ಪಿಆರ್ 2021ರ, ಎರಡು ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜನಗಣತಿಯ ಪ್ರಥಮ ಹಂತ ಏ.15ರಿಂದ ಮೇ 29ರ ವರೆಗೆ ಮನೆ ಗಣತಿ-ಪಟ್ಟಿ ಕಾರ್ಯ ನಡೆಯಲಿದೆ. ಈ ವೇಳೆ ಗಣತಿದಾರರಿಗೆ ಅಗತ್ಯ ಮಾಹಿತಿ ನೀಡುವ ಮೂಲಕ ನಾಗರಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಗಣತಿದಾರರು ಕೂಡ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ, ನಿಖರ ಮಾಹಿತಿ ಪಡೆಯಬೇಕು. ಜನಗಣತಿ ಹಾಗೂ ಎನ್‌ಪಿಆರ್ ದತ್ತಾಂಶ ಆಧರಿಸಿ ಸರ್ಕಾರ ಯೋಜನೆಗಳನ್ನು ರೂಪಿಸುತ್ತದೆ. ಕೆಲ ಗ್ರಾಮೀಣ ಪ್ರದೇಶಗಳ ಕುಟುಂಬಗಳು ವಲಸೆ ಹೋಗಿ ಪುನಃ ಸ್ವಸ್ಥಳಕ್ಕೆ ಮರಳುವುದು ರೂಢಿಯಲ್ಲಿದ್ದು, ವಲಸೆ ಗಣತಿಗೆ ಸವಾಲಾಗಿದೆ ಎಂದರು.
ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ, ಮಾಸ್ಟರ್ ತರಬೇತುದಾರರಾದ ಜಯೇಶ್, ವಿಜಯ್‌ಕುಮಾರ್ ಹಾಗೂ ತಹಸೀಲ್ದಾರ್‌ಗಳು, ನಗರಸಭೆ, ಪುರಸಭೆಗಳ ಮುಖ್ಯಾಧಿಕಾರಿಗಳು, ಗಣತಿ ಅಧಿಕಾರಿಗಳಿದ್ದರು.
ವ್ಯಂಗಭರಿತ ಪ್ರಶ್ನೆಗಳು ಬೇಡ: ಈ ಹಿಂದೆ ಜನಗಣತಿ ಮ್ಯಾನ್ಯುಯಲ್ ಆಗಿದ್ದರಿಂದ ಸಮಯ ವ್ಯರ್ಥವಾಗುತ್ತಿತ್ತು. ಆದರೆ, ಈಗ ಆ್ಯಪ್ ಇದೆ. ಇದರೊಂದಿಗೆ ಗಣತಿದಾರರು ನಿತ್ಯದ ಮಾಹಿತಿಯನ್ನು ಲಿಖಿತವಾಗಿ ದಾಖಲಿಸುವುದು ಉತ್ತಮ. ಯಾವುದೇ ಕಾರಣಕ್ಕೂ ಗಣತಿ ಸಮಯದಲ್ಲಿ ನಾಗರಿಕರಿಗೆ ವ್ಯಂಗ್ಯವಾಗಿ ಹಾಗೂ ಸಿಟ್ಟಾಗಿ ಪ್ರಶ್ನೆಗಳನ್ನು ಕೇಳಬಾರದೆಂದು ಗಣತಿದಾರರಿಗೆ ಎಸಿ ವಿ.ಪ್ರಸನ್ನ ಸೂಚಿಸಿದರು.